ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿರಿಯ ಸಹೋದರ ರಾಬರ್ಟ್ ನಿಧನ

ನ್ಯೂಯಾರ್ಕ್, ಆ.16:ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಸಹೋದರ ರಾಬರ್ಟ್ ಟ್ರಂಪ್ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ರಾಬರ್ಟ್‌ರನ್ನು ನ್ಯೂಯಾರ್ಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಬರ್ಟ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರ ಸಹೋದರ ಟ್ರಂಪ್ ಶುಕ್ರವಾರ ನ್ಯೂಯಾರ್ಕ್ ಸಿಟಿ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂದು ವೈಟ್ ಹೌಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಂಪ್ ಹಾಗೂ ರಾಬರ್ಟ್ ಇಬ್ಬರೂ ಉದ್ಯಮಿಗಳಾಗಿದ್ದು, ಇಬ್ಬರದ್ದು ವಿಭಿನ್ನ ವ್ಯಕ್ತಿತ್ವವಾಗಿತ್ತು.
ರಾಬರ್ಟ್ ಟ್ರಂಪ್ ಅವರು ಡೊನಾಲ್ಡ್ ಟ್ರಂಪ್ ಅವರ ನಾಲ್ವರು ಒಡಹುಟ್ಟಿದವರಲ್ಲೊಬ್ಬರಾಗಿದ್ದಾರೆ. ಅಮೆರಿಕದ ಅಧ್ಯಕ್ಷರ ಸೋದರ ತಂಗಿ ಮೇರಿ ಬರೆದಿದ್ದ ‘ ಟೂ ಮಚ್ ಆ್ಯಂಡ್ ನೆವರ್ ಇನಫ್’ ಕೃತಿಯ ಪ್ರಕಟನೆಯನ್ನು ತಡೆಹಿಡಿಯುವಂತೆ ಕೋರಿ ಟ್ರಂಪ್ ಕುಟುಂಬದ ಪರವಾಗಿ ರಾಬರ್ಟ್ ನ್ಯಾಯಾಲಯದ ಮೆಟ್ಟಲೇರಿದ್ದರು. ಈ ಕೃತಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ವಿವಾದಾತ್ಮಕ ವಿಷಯಗಳನ್ನು ಉಲ್ಲೇಖಿಸಲಾಗಿದೆಯೆಂದು ಹೇಳಲಾಗುತ್ತಿದೆ.