ವಿಶಾಖಪಟ್ಟಣ: ಮಗಳ ಶವ ಕೈಯಲ್ಲೇ ಎತ್ತಿಕೊಂಡು ಸಾಗಿದ ತಂದೆ
ಗ್ರಾಮದ ಸೇತುವೆ ಶಿಥಿಲಗೊಂಡಿದ್ದ ಹಿನ್ನೆಲೆ

ವಿಶಾಖಪಟ್ಟಣ, ಆ.16:ಇಡೀ ದೇಶ 74ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವಾಗ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ವಿಶಾಖಪಟ್ಟಣ ಪ್ರದೇಶದಲ್ಲಿ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ ಏಳು ವರ್ಷದ ಮಗಳ ಶವವನ್ನು 3 ಕಿ.ಮೀ.ದೂರ ಕೈಯಲ್ಲಿ ಹಿಡಿದುಕೊಂಡು ಮನೆ ತಲುಪಿದ ಘಟನೆ ನಡೆದಿದೆ. ಹೃದಯವಿದ್ರಾವಕ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೇತುವೆ ಶಿಥಿಲಗೊಂಡಿದ್ದ ಕಾರಣ ಹಳ್ಳಿ ತಲುಪುವ ಮೂರು ಕಿ.ಮೀ.ದೂರದಲ್ಲೇ ಆ್ಯಂಬುಲೆನ್ಸ್ ನಿಂತಿತ್ತು.ದಿಕ್ಕುತೋಚದ ತಂದೆ ತನ್ನ ಕೈಯಲ್ಲೇ ಶವ ಎತ್ತುಕೊಂಡು ಊರಿನತ್ತ ಸಾಗಿದರು. ಅವರೊಂದಿಗೆ ಪತ್ನಿ ಹಾಗೂ ಇಬ್ಬರು ಸಹೋದರರಿದ್ದರು.
ಈ ಘಟನೆಯು ಶುಕ್ರವಾರ ನಡೆದಿದ್ದು, ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವೈರಸ್ ಆಗಿರುವ ವೀಡಿಯೊ ಮೂಲಕ ಬೆಳಕಿಗೆ ಬಂದಿದೆ.
2014ರಲ್ಲಿ ಬೀಸಿದ್ದ ಚಂಡಮಾರುತಕ್ಕೆ ಡಂಬ್ರಿಗುಡಾ ಮಂಡಲ್‌ನ ಕಿಂಚುಮುಂಡ ಸಂತಬಯಲು ಜಂಕ್ಷನ್ ಸಮೀಪದ ಸೇತುವೆ ಶಿಥಿಲವಾಗಿತ್ತು. ಸ್ಥಳೀಯರು ಈ ತನಕ ಹಲವು ಬಾರಿ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸೇತುವೆ ದುರಸ್ತಿ ನಡೆದಿಲ್ಲ. ಬೈಕ್‌ಗಳು ಚಲಿಸಲು ಸೇತುವೆ ಯೋಗ್ಯವಾಗಿಲ್ಲ. ಬುಡಕಟ್ಟುಜನರು ನಡೆದುಕೊಂಡೇ ತಮ್ಮ ಊರನ್ನು ತಲುಪುತ್ತಿದ್ದಾರೆ.
ಡಂಬುಬ್ರಿಗುಡಾ ಮಂಡಲ್‌ನ ಕಿಟಲಂಗಿ ಪಂಚಾಯತ್‌ನ ಗೋಲೊರಿ ಬಾಬು ರಾವ್ ತನ್ನ ಏಳು ವರ್ಷದ ಪುತ್ರಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಅವರ ಮಗಳು ಶುಕ್ರವಾರ ಮೃತಪಟ್ಟಿದ್ದರು. ಶಿಥಿಲ ಸೇತುವೆ ತನಕ ಆ್ಯಂಬುಲೆನ್ ಬಂದಿದ್ದ ಬಾಬು ರಾವ್ ಆ ನಂತರ ಮಗಳ ಮೃತದೇಹವನ್ನು ಕೈಯಲ್ಲಿ ಹಿಡಿದುಕೊಂಡು ಮನೆಗೆ ತೆರಳಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.







