ದಿಲ್ಲಿ: ದಲಾಯಿ ಲಾಮಾ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದ ಚೀನಾದ ಪ್ರಜೆ ಸೆರೆ

ಹೊಸದಿಲ್ಲಿ, ಆ.16: ಅಕ್ರಮ ಹಣ ವರ್ಗಾವಣೆ, ಟಿಬೇಟಿಯನ್ ಧಾರ್ಮಿಕ ಗುರು ದಲಾಯಿಲಾಮಾ ಹಾಗೂ ಅವರ ಅನುಯಾಯಿಗಳ ಕುರಿತು ಮಾಹಿತಿ ಕಲೆ ಹಾಕಲು ಟಿಬೆಟಿಯನ್ ಬಿಕ್ಕುಗಳಿಗೆ ಲಂಚ ನೀಡುತ್ತಿದ್ದ ಆರೋಪದಲ್ಲಿ ಚೀನಾದ ಪ್ರಜೆಯನ್ನು ಆದಾಯ ತೆರಿಗೆ ಇಲಾಖೆ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ದಿಲ್ಲಿಯ ಮಜ್ನು ಕಾ ಟಿಲಾದ ಸಮೀಪ ನೆಲೆಸಿರುವ ಹಲವು ಜನರಿಗೆ 2 ಲಕ್ಷರೂ.ನಿಂದ 3 ಲಕ್ಷ ರೂ. ತನಕ ನೀಡಲಾಗಿದೆ. ಗುರುತು ಹಿಡಿಯುವ ಪ್ರಕ್ರಿಯೆ ನಡೆಯುತ್ತಿದೆ. ಚಾರ್ಲಿ ಪೆಂಗ್ ಎಂಬ ನಕಲಿ ಹೆಸರಲ್ಲಿ ತಿರುಗಾಡುತ್ತಿದ್ದ ಲುಯೊ ಸಾಂಗ್‌ನನ್ನು ಮಂಗಳವಾರ ದಿಲ್ಲಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನಡೆಸಿರುವ ದಾಳಿಯ ವೇಳೆ ಬಂಧಿಸಲಾಗಿದೆ. ಈಗ ಆತನಿಗೆ ಜಾಮೀನು ಲಭಿಸಿದೆ.
ಸಾಂಗ್ 2014ರಲ್ಲಿ ನೇಪಾಳದ ಮೂಲಕ ಭಾರತಕ್ಕೆ ಅಕ್ರಮಪ್ರವೇಶ ಮಾಡಿದ್ದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮಿರೆರಾಂ ಮಹಿಳೆಯನ್ನು ವಿವಾಹವಾಗಿದ್ದ ಸಾಂಗ್ ಮಣಿಪುರದಲ್ಲಿ ಲಭಿಸಿದ ನಕಲಿ ಪಾಸ್‌ಪೋರ್ಟ್ ಮೂಲಕ ಭಾರತೀಯ ಗುರುತು ಪತ್ರ ಪಡೆದಿದ್ದ. ಈತನ ಬಳಿ ಆಧಾರ್ ಹಾಗೂ ಪಾನ್ ಕಾರ್ಡ್ ಕೂಡ ಇದೆ. ಸಾಂಗ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವವನ ಮೂಲಕ ಟಿಬೆಟಿಯನ್ ಭಿಕ್ಕುಗಳಿಗೆ ಲಂಚ ನೀಡುತ್ತಿದ್ದ ಎಂದು ಐಟಿ ಇಲಾಖೆ ತಿಳಿಸಿದೆ.





