ಹಿರಿಯ ಪತ್ರಕರ್ತ ಸೋಮಶೇಖರ್ ಯಡವಟ್ಟಿ ಕೊರೋನ ಸೋಂಕಿಗೆ ಬಲಿ; ಸಿಎಂ ಸಂತಾಪ

ಬೆಂಗಳೂರು, ಆ. 16: ಮಾರಕ ಕೊರೋನ ವೈರಸ್ ಸೋಂಕಿನಿಂದಾಗಿ ಹಿರಿಯ ಪತ್ರಕರ್ತ ಸೋಮಶೇಖರ್ ಯಡವಟ್ಟಿ(50) ಅವರು ರವಿವಾರ ಬೆಳಗಿನಜಾವ ಮೃತಪಟ್ಟಿದ್ದಾರೆ.
ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ, ಬಂಧು-ಮಿತ್ರರು ಹಾಗೂ ಸಹೋದ್ಯೋಗಿಗಳನ್ನು ಅಗಲಿರುವ ಸೋಮಶೇಖರ್ ಧಾರವಾಡ ಮೂಲದವರು. ಶ್ರೀಯುತರು ಕರುನಾಡಸಂಜೆ, ಉದಯವಾಣಿ ಸೇರಿದಂತೆ ವಿವಿಧ ಪ್ರತಿಕೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶುಕ್ರವಾರ(ಆ.14) ರಾತ್ರಿ ಕೆಲಸ ನಿರ್ವಹಿಸಿದ್ದು, ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಂಡಿದ್ದರಿಂದ ನಿತ್ರಾಣಗೊಂಡಿದ್ದರು. ನಿನ್ನೆ ಮಧ್ಯಾಹ್ನದ ವೇಳೆ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಶಿವಾನಂದ ವೃತ್ತದ ಬಳಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದರು.
ಆದರೆ, ಅಲ್ಲಿ ಬೆಡ್ ದೊರೆಯದ ಕಾರಣ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ರವಿವಾರ ಮುಂಜಾನೆ 3:30ರ ಸುಮಾರಿಗೆ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಪತ್ರಿಕೋದ್ಯಮದಲ್ಲಿ ನಿಷ್ಠೂರತೆ ಮೂಲಕ ಜನಪ್ರಿಯರಾಗಿದ್ದ ಸೋಮಶೇಖರ್ ಯಡವಟ್ಟಿ ಅವರು, ಪತ್ರಕರ್ತ ಮಿತ್ರರು ಹಾಗೂ ಸಹೋದ್ಯೋಗಿಗಳಿಗೆ `ಸೋಮಣ್ಣ' ಎಂದು ಚಿರಪರಿಚಿತರು.
ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಅವರು ಕುಟುಂಬದ ಸದಸ್ಯರು ಮತ್ತು ಸಹೋದ್ಯೋಗಿ ಮಿತ್ರರರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸಂಬಂಧಿಕರಿಗೆ ಮೃತದೇಹ ನೀಡದಿರಲು ಬಿಬಿಎಂಪಿ ತೀರ್ಮಾನಿಸಿದ್ದು, ನಗರದ ಸುಮ್ಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎಂದು ಗೊತ್ತಾಗಿದೆ.
ಸಿಎಂ ಸಂತಾಪ: `ಸರಳ, ಸಜ್ಜನ ವ್ಯಕ್ತಿಯಾಗಿದ್ದ ಸೋಮಶೇಖರ್ ಯಡವಟ್ಟಿ ಅವರು ತಮ್ಮ ನಿಷ್ಪಕ್ಷಪಾತ ಹಾಗೂ ವಸ್ತುನಿಷ್ಠ ವರದಿಗಾರಿಕೆಗೆ ಮಾದರಿ. ರಾಜ್ಯ ಸರಕಾರಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರು ನಡೆಸಿದ ಸಂದರ್ಶನ ನನ್ನ ನೆನಪಿನಂಗಳದಲ್ಲಿ ಇನ್ನೂ ಹಚ್ಚ ಹಸಿರಾಗಿದೆ. ಯಡವಟ್ಟಿ ನಿಧನ ಮಾಧ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.







