ಕಳತ್ತೂರು, ಪಾದೂರು ಗ್ರಾಮಗಳಲ್ಲಿ ಸುಂಟರಗಾಳಿ: ಮನೆ, ಅಂಗಡಿಗಳಿಗೆ ಹಾನಿ, ಇಬ್ಬರಿಗೆ ಗಾಯ

ಕಾಪು, ಆ.16: ಕಳತ್ತೂರು ಹಾಗೂ ಪಾದೂರು ಗ್ರಾಮದಲ್ಲಿ ರವಿವಾರ ಬೆಳಗ್ಗೆ 7.30ರ ಸುಮಾರಿಗೆ ಬೀಸಿದ ಸುಂಟರಗಾಳಿಯಿಂದ ಮನೆ, ಅಂಗಡಿಗಳಿಗೆ ಹಾನಿಯಾಗಿದ್ದು, ಇದರಿಂದ ಮಹಿಳೆ ಸಹಿತ ಇಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದೆ.
ಭಾರೀ ಗಾಳಿಯಿಂದಾಗಿ ಪಾದೂರು ಗ್ರಾಮದ ಚಂದ್ರನಗರ ಎಂಬಲ್ಲಿರುವ ಬಾಲಕೃಷ್ಣ ಮಡಿವಾಳ ಹಾಗೂ ಸುಜಾತ ಎಂಬವರ ಮನೆಗಳ ಸಿಮೆಂಟ್ ಶೀಟ್ ಹಾರಿ ಹೋಗಿದ್ದು, ಸುಮಾರು ಒಂದು ಲಕ್ಷ ರೂ. ನಷ್ಟ ಅಂದಾಜಿಸ ಲಾಗಿದೆ. ಅಲ್ಲದೆ ಇದರಿಂದ ಮನೆಯ ಗೋಡೆಗಳಿಗೂ ಹಾನಿ ಉಂಟಾಗಿದೆ.
ಬಿರುಗಾಳಿಗೆ ಚಾವಣಿ ಕುಸಿತದಿಂದ ಮನೆಯೊಳಗಿದ್ದ ಬಾಲಕೃಷ್ಣ ಮಡಿ ವಾಳರ ಪತ್ನಿ ಶ್ಯಾಮಲಾ ಹಾಗೂ ಸುಜಾತ ಅವರ ಪತಿ ಮೂರ್ತಿ ಎಂಬವರ ತಲೆಗೆ ಸಿಮೆಂಟ್ ಶೀಟ್ ತುಂಡು ಬಿದ್ದು ಗಾಯಗಳಾಗಿವೆ. ಇವರಿಬ್ಬರು ಕಾಪು ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಪಾದೂರು ಗ್ರಾಮಲೆಕ್ಕಾಧಿಕಾರಿ ಕ್ಲಾರೆನ್ಸ್ ಲಿಸ್ಟನ್ ತಿಳಿಸಿದ್ದಾರೆ.
ಕಳತ್ತೂರು ಗ್ರಾಮದ ರಸ್ತೆ ಬದಿ ಇರುವ ಪ್ರಕಾಶ್ ನಾಯ್ಕೆ ಎಂಬವರ ಗೂಡಂಗಡಿಯ ಸಿಮೆಂಟ್ ಶೀಟ್ ಹಾರಿ ಹೋಗಿ ಸುಮಾರು 5ಸಾವಿರ ರೂ. ನಷ್ಟ ಉಂಟಾಗಿದೆ. ಕಳತ್ತೂರು ಗ್ರಾಮದ ರಾಘವೇಂದ್ರ ಉಪಾಧ್ಯ ಹಾಗೂ ಸುಬ್ರಹ್ಮಣ್ಯ ಭಟ್ ಎಂಬವರ ಮನೆಯ ಕಂಪೌಂಡು ಗೋಡೆಗಳು ಕುಸಿದು ಬಿದ್ದಿರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 22.0ಮಿ.ಮೀ. ಮಳೆಯಾಗಿದೆ. ಉಡುಪಿ- 12.6ಮಿ.ಮೀ., ಕುಂದಾಪುರ- 22.5ಮಿ.ಮೀ., ಕಾರ್ಕಳ- 29.5ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.







