ಜನಪರ ಹೋರಾಟಕ್ಕೆ ಸತ್ಯಾಗ್ರಹವೇ ಅಸ್ತ್ರವಾಗಲಿ: ರವಿಕೃಷ್ಣಾರೆಡ್ಡಿ

ಬೆಂಗಳೂರು, ಆ.16: ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅಹಿಂಸೆ, ಉಪವಾಸ ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಇದರ ದಾರಿಯಲ್ಲಿಯೇ ನಮ್ಮ ಮುಂದಿನ ಜನಪರ ಹೋರಾಟಗಳು ರೂಪಗೊಳ್ಳಬೇಕಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಾಭಾಯಿ ಪಟೇಲ್‍ರು ಹತ್ತಾರು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ಅವರ ತಾಳ್ಮೆ, ವಿಶ್ವಾಸ, ಧೈರ್ಯ ನಮ್ಮನ್ನು ಮುನ್ನಡೆಸಲಿ ಎಂದು ಆಶಿಸಿದ್ದಾರೆ.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮಹಾನ್ ಪಂಡಿತರಾಗಿದ್ದರು. ಅವರು ಬರೆದಿರುವ ಪುಸ್ತಕಗಳನ್ನು ಈಗಿನ ರಾಜಕಾರಣಿಗಳು ತಮ್ಮ ಜೀವಮಾನ ಪೂರ್ತಿ ಓದಿದರು ಮುಗಿಯುವುದಿಲ್ಲ. ಅಂತಹ ಮಹಾನ್ ವ್ಯಕ್ತಿಗಳು ರೂಪಿಸಿದ ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ಒಳಗೊಂಡಿರುವ ನಮ್ಮ ದೇಶವನ್ನು ಒಬ್ಬ ಸರ್ವಾಧಿಕಾರಿ ಆಳ್ವಿಕೆ ನಡೆಸಲು ಸಾಧ್ಯವಾಗುವುದಿಲ್ಲ. ನಮ್ಮ ಸಂವಿಧಾನದಲ್ಲಿ ಇದಕ್ಕೆ ಅವಕಾಶವೂ ಇಲ್ಲ. ಜಾತಿ, ಮತ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶವನ್ನು ನೀಡಲಾಗಿದೆ. ಆದರೂ ಕೆಲವು ಸ್ಥಾಪಿತ ಹಿತಾಸಕ್ತಿಗಳು ದೇಶದ ಪ್ರಜಾಪ್ರಭುತ್ವವನ್ನು ನಿರ್ಮೂಲನೆ ಮಾಡಲು ಹೊರಟಿವೆ. ಈ ಶಕ್ತಿಗಳನ್ನು ಸೋಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ ಎಂದು ಅವರು ಹೇಳಿದರು.







