ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ಸೈಕಲ್‍ನಲ್ಲಿ ಸಾಗಿಸಿದ ಕುಟುಂಬಸ್ಥರು
ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ

ಬೆಳಗಾವಿ, ಆ.16: ಕೊರೋನ ವೈರಸ್ ಭೀತಿಯಿಂದ ಯಾರೂ ಸಹ ಸಹಾಯಕ್ಕಾಗಿ ಬಾರದ ಕಾರಣದಿಂದ ವ್ಯಕ್ತಿಯೊಬ್ಬರ ಶವವನ್ನು ಕುಟುಂಬದವರು ಸೈಕಲ್‍ನಲ್ಲಿಯೇ ಸಾಗಿಸಿರುವ ಹೃದಯವಿದ್ರಾವಕ ಘಟನೆ ಎಂ.ಕೆ. ಹುಬ್ಬಳ್ಳಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲಿನ ವೈದ್ಯರು ಕೋವಿಡ್-19 ಸೋಂಕಿನ ಲಕ್ಷಣಗಳಿದ್ದು ತಪಾಸಣೆ ಮಾಡಿಸಿಕೊಳ್ಳಿ ಎಂದು ಸೂಚಿಸಿದ್ದಾರೆ. ಈ ಹಿನ್ನೆಲೆ ಮನೆಗೆ ವಾಪಸಾಗಿದ್ದ ವ್ಯಕ್ತಿಯು, ಬೆಳಗಿನ ಜಾವ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸಾವಿನ ಸುದ್ದಿಯನ್ನು ಕುಟುಂಬದವರು ತಹಶೀಲ್ದಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಸೂಕ್ತ ಸ್ಪಂದನೆ ಸಿಗಲಿಲ್ಲ ಎನ್ನಲಾಗಿದ್ದು, ಶವ ಸಾಗಿಸಲು ಖಾಸಗಿ ವಾಹನದವರೂ ಬರಲಿಲ್ಲ. ಹೀಗಾಗಿ, ಸೈಕಲ್‍ನಲ್ಲಿ ಕುಟುಂಬದವರು ಶವವನ್ನು ಸಾಗಿಸಿದರು ಎಂದು ತಿಳಿದುಬಂದಿದೆ.
ಆಕ್ರೋಶ: ಸೈಕಲ್‍ನಲ್ಲಿಯೇ ಮೃತದೇಹವನ್ನು ಸಾಗಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರಕಾರದ ವ್ಯವಸ್ಥೆ ಸರಿಯಿಲ್ಲ ಎನ್ನುವುದು ಉತ್ತಮ ಉದಾಹರಣೆಯೆಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.







