ನವ ಇತಿಹಾಸದ ನಿರ್ಮಾಣವಾಗಲಿ: ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್
ತುಳು ಅಧ್ಯಯನ ಪೀಠ ಆಯೋಜಿಸಿದ ಸರಣಿ ಉಪನ್ಯಾಸ
ಮಂಗಳೂರು, ಆ.16: ಎನ್.ಎಸ್.ಕಿಲ್ಲೆ, ಪಣಿಯಾಡಿ ಶ್ರೀನಿವಾಸ್ ಉಪಾಧ್ಯಾಯರು, ಸದಾಶಿವರಾಯರು ಹೀಗೆ ಹಲವರು ಸ್ವಾತಂತ್ರ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡ ಧೀಮಂತರು ನಮ್ಮ ತುಳುವರು. ನಮ್ಮ ಅಭಿವೃದ್ಧಿಯನ್ನು ನಾವೇ ಮಾಡಬೇಕು. ನವ ಇತಿಹಾಸದ ನಿರ್ಮಾಣ ಮಾಡಬೇಕು ಎಂದು ತುಳುಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಮತ್ತು ಮಾಜಿ ರಿಜಿಸ್ಟರ್ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯ ಸಂಧ್ಯಾಕಾಲೇಜು ತುಳು ಸ್ನಾತಕೋತ್ತರ ವಿಭಾಗ ಮತ್ತು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ ಆಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಯುವ ಪೀಳಿಗೆಗೆ ಇತಿಹಾಸ ತಿಳಿಯುವ ಆಸಕ್ತಿ ಪ್ರಥಮವಾಗಿ ಹುಟ್ಟಬೇಕು. ಆಗ ಮಾತ್ರ ಹೊಸ ಬದುಕನ್ನು ಅರ್ಥಪೂರ್ಣವಾಗಿ ಕಟ್ಟಬಹುದು. ‘ಭಾರತದ ಸ್ವಾತಂತ್ರದ ಪೊರ್‌ಂಬಾಟೊಡ್ ತುಳುವೆರ್’ ಎಂಬ ವಿಷಯದ ಕುರಿತು ನಡೆದ ಉಪನ್ಯಾಸದಲ್ಲಿ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಮಾತನಾಡಿ, ದೇಶಕ್ಕಾಗಿ ಚಿಂತನೆ ನಡೆಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ನಾವು ಕಾನೂನಿಗೆ ಬದ್ಧವಾಗಿ ನಡೆಯಬೇಕು ಎಂದು ಆಶಯ ನುಡಿಗಳನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ವಿದ್ವಾಂಸಕ ಪ್ರೊ.ಅಮೃತ ಸೋಮೇಶ್ವರ ಸರಣಿ ಉಪನ್ಯಾಸ ಕಾರ್ಯಕ್ರಮಗಳು ತುಳು ಭಾಷೆಯನ್ನು ಬೆಳೆಸುವಲ್ಲಿ ಹೆಚ್ಚು ಸಹಾಯಕವಾದುದು ಎಂದರು.
ಮುಖ್ಯ ಅತಿಥಿಗಳಾಗಿ ಡಾ.ವಾಮನ ನಂದಾವರ ಮಾತನಾಡಿ, ಸದಾಶಿವರಾಯರು ತುಳುನಾಡಿಗೆ ನೀಡಿದ ಕೊಡುಗೆಯನ್ನು ವಿವರಿಸಿ, ತುಳು ನಾಡಿನಲ್ಲಿ ಸಾಮಾಜಿಕ ಸುಧಾರಣೆಯನ್ನು ಮಾಡುತ್ತಾ ಇಡೀ ತನ್ನ ಜೀವನವನ್ನು ಹೋರಾಟದಲ್ಲಿ ತೊಡಗಿಸಿಕೊಂಡವರು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಬಿ.ಎಂ., ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ., ಕಾರ್ಯಕ್ರಮ ಸಂಯೋಜಕಿ ಶ್ರುತಿ ಅಮೀನ್ ಕೆ., ಡಾ.ಸಾಯಿಗೀತಾ ಮತ್ತು ಶ್ಯಾಮ್ ಪ್ರಸಾದ್ ಉಪಸ್ಥಿತರಿದ್ದರು.
ಉಪನ್ಯಾಸಕಿ ಡಾ.ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿದರು. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಸುಭಾಶ್‌ಚಂದ್ರ ಕಣ್ವತೀರ್ಥ ತುಳು ಆಶಯ ಗೀತೆ ಹಾಡಿದರು.







