ಆಟೋ ಚಾಲಕರಿಗೆ ಸಿಗದ ಪರಿಹಾರ: ಆ.17ರಿಂದ 'ಎಲ್ಲಿ 5 ಸಾವಿರ?' ಅಭಿಯಾನ
ಬೆಂಗಳೂರು, ಆ.15: ರಾಜ್ಯ ಸರಕಾರ ಕೋವಿಡ್ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ 5 ಸಾವಿರ ರೂ.ಪರಿಹಾರ ಕೊಡುತ್ತೇವೆಂದು ಪ್ರಚಾರ ಪಡೆದು, ಅದನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಆಮ್‍ಆದ್ಮಿ ಪಕ್ಷದ ಆಟೋ ಘಟಕದ ವತಿಯಿಂದ ಆ.17ರಿಂದ ಎಲ್ಲಿ 5 ಸಾವಿರ ಎಂಬ ಅಭಿಯಾನ ಆರಂಭಿಸುತ್ತಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷವು, ರಾಜ್ಯದಲ್ಲಿ ಆರು ಲಕ್ಷ ಆಟೋಗಳು ಅಧಿಕೃತವಾಗಿ ಚಲಾವಣೆಯಲ್ಲಿವೆಯೆಂದು ಸರಕಾರವೇ ಹೇಳಿದೆ. ಇದರಲ್ಲಿ ಕೋವಿಡ್ ಪರಿಹಾರಕ್ಕಾಗಿ ಸುಮಾರು 3.5 ಲಕ್ಷ ಆಟೋಗಳು ನೋಂದಾಯಿಸಿಕೊಂಡಿದ್ದಾರೆ. ಆದರೆ, ಸರಕಾರ ಕೇವಲ 40 ಸಾವಿರ ಮಂದಿಗೆ ಕೊಟ್ಟು, ಮಿಕ್ಕವರಿಗೆ ಪರಿಹಾರ ನೀಡುವುದನ್ನು ನಿಲ್ಲಿಸಿದೆ. ಈ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರನ್ನು ಪ್ರಶ್ನಿಸಿದರೆ ಅಧಿಕಾರಿಗಳ ಕಡೆಗೆ ತೋರಿಸುತ್ತಾರೆ. ಅಧಿಕಾರಿಗಳನ್ನು ಕೇಳಿದರೆ ಈ ಬಗ್ಗೆ ನಮಗೇನು ಗೊತ್ತಿಲ್ಲ ಎನ್ನುವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಹೀಗಾಗಿ ಸಂತ್ರಸ್ತರು ಪರಿಹಾರವನ್ನು ಯಾರ ಬಳಿ ಕೇಳಬೇಕು. ಈ ಹಿನ್ನೆಲೆಯಲ್ಲಿ ಆಮ್‍ಆದ್ಮಿ ವತಿಯಿಂದ ಎಲ್ಲಿ 5 ಸಾವಿರ ಎಂಬ ಅಭಿಯಾನ ಆರಂಭಿಸಲಾಗಿದೆ.
ನಮ್ಮ ಅಭಿಯಾನಕ್ಕೆ ರಾಜೀವ್‍ಗಾಂಧಿ ಆಟೋ ಚಾಲಕರ ವೇದಿಕೆ, ಆದರ್ಶ ಆಟೋ ಯೂನಿಯನ್, ಜಯ ಕರ್ನಾಟಕ ಆಟೋ ಘಟಕ, ಕರ್ನಾಟಕ ರಕ್ಷಣಾ ವೇದಿಕೆ ಆಟೋ ಘಟಕ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ ಎಂದು ಆಮ್‍ಆದ್ಮಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.





