ವ್ಯವಸ್ಥಿತ ಲೂಟಿ ಮಾಡಿದ್ದರೂ ಕೃತ್ಯ ಖಂಡಿಸದಿರುವುದು ನಾಚಿಕೆಗೇಡು: ಕಾಂಗ್ರೆಸ್ ವಿರುದ್ಧ ಲಿಂಬಾವಳಿ ಕಿಡಿ
ಬೆಂಗಳೂರು ಹಿಂಸಾಚಾರ ಪ್ರಕರಣ

ಬೆಂಗಳೂರು, ಆ. 16: `ಭಯೋತ್ಪಾದಕರ ತಾಣ ಎನ್ನಲಾಗಿರುವ ಕಾಶ್ಮೀರ ಕಣಿವೆಯಲ್ಲಿಯೂ ಇಂತಹ ಕೃತ್ಯಗಳು ಸಂಭವಿಸಿರಲು ಸಾಧ್ಯವಿಲ್ಲ. ಆ ರೀತಿಯಲ್ಲಿ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂತಹದೊಂದು ದುಷ್ಕೃತ್ಯ ರಾಜ್ಯದಲ್ಲಿ ನಡೆದಿರುವುದು ದುರದೃಷ್ಟಕರ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ಸಂಬಂಧ ನೇಮಿಸಿರುವ ಬಿಜೆಪಿ ಪರಿಶೀಲನಾ ಸಮಿತಿ ಅಧ್ಯಕ್ಷ ಅರವಿಂದ ಲಿಂಬಾವಳಿ ಆಗ್ರಹಿಸಿದ್ದಾರೆ.
ರವಿವಾರ ಬೆಂಕಿಗೆ ಆಹುತಿಯಾಗಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅತ್ಯಂತ ವ್ಯವಸ್ಥಿತ ಮತ್ತು ಪೂರ್ವ ನಿಯೋಜಿತ ದಾಳಿ ಇದಾಗಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಲು ಅವಕಾಶವಿಲ್ಲದ ರೀತಿಯಲ್ಲಿ ಗಲಭೆ, ಹಿಂಸಾಚಾರ ನಡೆಸಲಾಗಿದೆ ಎಂದು ತಿಳಿಸಿದರು.
ಈ ಕೃತ್ಯಕ್ಕೆ ಕಾಂಗ್ರೆಸ್ ಪಕ್ಷದೊಳಗಿನ ಒಳ ರಾಜಕೀಯವೇ? ಶಾಸಕರ ರಾಜಕೀಯ ಏಳ್ಗೆ ಸಹಿಸದೆ ನಡೆಸಿದ ಕೃತ್ಯವೋ? ಅಥವಾ ದಲಿತರ ಮೇಲಿನ ದೌರ್ಜನ್ಯವೋ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ತನ್ನ ಪಕ್ಷದ ಶಾಸಕರ ನಿವಾಸದ ಮೇಲೆ ದಾಳಿ ನಡೆಸಿ, ವ್ಯವಸ್ಥಿತ ಲೂಟಿ ಮಾಡಿದ್ದರೂ ಕೃತ್ಯವನ್ನು ಖಂಡಿಸದೆ ಇರುವುದು ನಿಜಕ್ಕೂ ನಾಚಿಕೆಗೇಡು. ಇದನ್ನು ಹೀಗೆ ಬಿಟ್ಟರೆ ಕರ್ನಾಟಕ ರಾಜ್ಯ ಅಕ್ರಮ ಚಟುವಟಿಕೆಗಳ ತಾಣ ಆಗುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.
ಪೊಲೀಸರು ಘಟನೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳನ್ನು ಬಂಧಿಸಿದರೆ ಅವರನ್ನು ಅಮಾಯಕರು ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಆದರೆ, ಅಮಾಯಕರು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ದೌರ್ಜನ್ಯಕ್ಕೆ ಗುರಿಯಾದ ಇಲ್ಲಿನ ಪೊಲೀಸರು. ಇಡೀ ದೇಶವೇ ತಲೆ ತಗ್ಗಿಸುವ ಕೃತ್ಯ ನಡೆದಿದ್ದು, ಈ ಕೃತ್ಯದಲ್ಲಿ ಪಾಲ್ಗೊಂಡವರಿಗೆ ಶಿಕ್ಷೆ ಆಗಲೇಬೇಕು ಎಂದ ಅವರು, ಗಲಭೆಯಲ್ಲಿ ಹೆಸರು ಕೇಳಿಬರುತ್ತಿರುವ ಎಸ್‍ಡಿಪಿಐ ನಿಷೇಧಕ್ಕೂ ಸರಕಾರ ಕ್ರಮ ವಹಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಸೂಕ್ತ ರಕ್ಷಣೆ ನೀಡಲು ಸರಕಾರ ಕ್ರಮ ವಹಿಸಲಿದೆ. ಅಲ್ಲದೆ, ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದು, ಸತ್ಯಾಂಶ ಬೆಳಕಿಗೆ ಬರಲಿದೆ. ಶಾಸಕರ ನಿವಾಸಕ್ಕೆ ಪಕ್ಷದ ನಿಯೋಗ ಭೇಟಿ ನೀಡಿ ಪರಿಶೀಲಿಸಿದೆ. ಎರಡೂ ಪೊಲೀಸ್ ಠಾಣೆಗೆ ಭೇಟಿ ನೀಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಪಕ್ಷಕ್ಕೆ ವರದಿ ನೀಡಲಾಗುವುದು ಎಂದು ಅರವಿಂದ ಲಿಂಬಾವಳಿ ತಿಳಿಸಿದರು.
ಈ ವೇಳೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಬಿಜೆಪಿ ನಿಯೋಗದಲ್ಲಿ ಮಾಲೀಕಯ್ಯ ಗುತ್ತೇದಾರ್, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಪಿ.ಸಿ. ಮೋಹನ್, ಎ.ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.







