ರಾಜ್ಯಾದ್ಯಂತ 181 ವಸತಿ ಶಾಲೆಗಳ ನಿರ್ಮಾಣ: ಡಿಸಿಎಂ ಗೋವಿಂದ ಕಾರಜೋಳ

ಕಲಬುರಗಿ, ಆ. 16: ಪರಿಶಿಷ್ಟ ಜನಾಂಗದ ಏಳಿಗೆಗಾಗಿ ಹಾಗೂ ಅವರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ರಾಜ್ಯಾದ್ಯಂತ ಸಮಾಜ ಕಲ್ಯಾಣ ಇಲಾಖೆಯ 181 ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.
ರವಿವಾರ ಜಿಲ್ಲೆಯ ಸೇಡಂ ಪಟ್ಟಣದ ಸುವರ್ಣಾ ಭವನದಲ್ಲಿ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ 122 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಒಂದು ವರ್ಷದ ಅವಧಿಯಲ್ಲಿ 47 ವಸತಿ ಶಾಲೆಗಳನ್ನು ನೂತನ ಕಟ್ಟಡ ಕಾಮಗಾರಿಗಳು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. ಅಲ್ಲದೆ 181 ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಒಟ್ಟಾರೆ 2,450 ಕೋಟಿ ರೂ.ಖರ್ಚು ಮಾಡಲಾಗುತ್ತಿದೆ ಎಂದರು.
ಕಳೆದ ಸಾಲಿನಲ್ಲಿ ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ 26 ಸಾವಿರ ಕೋಟಿ ರೂ. ವಿನಿಯೋಗಿಸಲಾಗಿದೆ. ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 824 ವಸತಿ ಶಾಲೆಗಳ ಪೈಕಿ ಸ್ವಂತ ಕಟ್ಟಡಕ್ಕಾಗಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳು ಮುಂದಿನ ವರ್ಷದಲ್ಲಿ ಪೂರ್ಣಗೊಳ್ಳಲಿವೆ. ಈ ಶಾಲೆಗಳಲ್ಲಿ ಸುಮಾರು 1.20 ಲಕ್ಷ ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ ವಸತಿ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಊಟ, ವಸತಿ ನೀಡಿ ಕೇವಲ ಮಕ್ಕಳನ್ನು ದಷ್ಟ-ಪುಷ್ಟ ಮಾಡುವುದಷ್ಟೆ ಅಲ್ಲಾ ಬದಲಾಗಿ ಅವರನ್ನು ಬುದ್ಧಿವಂತರು, ವಿದ್ಯಾವಂತರನ್ನಾಗಿ ಮಾಡುವ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆ ಹೊತ್ತಿದೆ. ಇದಕ್ಕೆ ತಾಜಾ ಉದಾಹಣೆಯಾಗಿ ಇತ್ತೀಚೆಗೆ ಪ್ರಕಟಗೊಂಡ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ವಸತಿ ಶಾಲೆಗಳ ಮಕ್ಕಳ ಫಲಿತಾಂಶ ಕ್ರಮವಾಗಿ ಶೇ.94 ಮತ್ತು ಶೇ.86 ರಷ್ಟಿದೆ. 14 ಜಿಲ್ಲೆಗಳಲ್ಲಿ ಎಸೆಸೆಲ್ಸಿ ವಸತಿ ಶಾಲೆಯ ಮಕ್ಕಳು ಪ್ರಥಮ ಸ್ಥಾನದಲ್ಲಿದ್ದಾರೆ. ಈ ಮಕ್ಕಳ ಸಾಧನೆ ಅದ್ವಿತೀಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದು ವರ್ಷದ ಅವಧಿಯಲ್ಲಿ ಸೇಡಂ ಉಪ ವಿಭಾಗದಲ್ಲಿ ಬರುವ ಸೇಡಂ, ಚಿಂಚೋಳಿ ಹಾಗೂ ಚಿತ್ತಾಪೂರ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 232 ಕೋಟಿ ರೂ., ಲೋಕೋಪಯೋಗಿ ಇಲಾಖೆಯಿಂದ 150 ಕೋಟಿ ರೂ. ಹಾಗೂ ಡಿ.ಎಂ.ಎಫ್.ನಿಧಿಯಿಂದ 140ಕೋಟಿ ರೂ.ಗಳು ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ನಬಾರ್ಡ್ ಯೋಜನೆಯಡಿ 176 ಪ್ರಾಥಮಿಕ ಶಾಲೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಗೋವಿಂದ ಕಾರಜೋಳ ಮಾಹಿತಿ ನೀಡಿದರು.
ಸಂಸದ ಉಮೇಶ್ ಜಿ.ಜಾದವ್, ಶಾಸಕರಾದ ರಾಜಕುಮಾರ್ ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ್ ಸೇಡಂ ಹಾಗೂ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.







