ಐಎಎಸ್ಗೆ ಶಾ ಫೈಸಲ್ ಮರು ಸೇರ್ಪಡೆಯಾದರೂ ಅವರನ್ನು ‘ಅಸಾಂವಿಧಾನಿಕವಾಗಿ’ ನಡೆಸಿಕೊಂಡದ್ದನ್ನು ಮರೆಯಲು ಅಸಾಧ್ಯ
ಕಣ್ಣನ್ ಗೋಪಿನಾಥನ್

ಫೋಟೊ ಕೃಪೆ: thewire.in
ಹೊಸದಿಲ್ಲಿ, ಆ. 16: ಶಾ ಫೈಸಲ್ ಅವರು ಮತ್ತೆ ಐಎಎಸ್ಗೆ ಮರು ಸೇರ್ಪಡೆಯಾದರೂ ಅವರನ್ನು ಅಸಾಂವಿಧಾನಿಕವಾಗಿ ಬಂಧಿಸುವ ಸಂದರ್ಭ ವ್ಯವಸ್ಥೆ ನಡೆಸಿಕೊಂಡ ರೀತಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಹೇಳಿದ್ದಾರೆ.
‘theprint.inಗೆ ನೀಡಿದ ಸಂದರ್ಶನದಲ್ಲಿ ಕಣ್ಣನ್ ಅವರು, ಫೈಸಲ್ ಅವರು ಮತ್ತೆ ಸೇವೆಗೆ ಸೇರುವ ಬಗ್ಗೆ ಸುದ್ದಿ ಓದಿ ತನಗೆ ಅಚ್ಚರಿ ಉಂಟಾಯಿತು. ಆದರೆ, ತನ್ನ ರಾಜೀನಾಮೆ ಕುರಿತು ಮತ್ತೊಮ್ಮೆ ಯೋಚಿಸಲಾರೆ ಎಂದರು.
‘‘ನಾನು ಮೊದಲು ಐಎಎಸ್ಗೆ ರಾಜೀನಾಮೆ ನೀಡಿರಲಿಲ್ಲ. ಯಾಕೆಂದರೆ, ಫೈಸಲ್ ರಾಜೀನಾಮೆ ನೀಡಿದ್ದರು. ಪೈಸಲ್ ಅವರ ಬಂಧನದ ನಂತರ ವ್ಯವಸ್ಥೆ ಅವರನ್ನು ಅಸಾಂವಿಧಾನಿಕವಾಗಿ, ನಿರ್ಲಜ್ಜವಾಗಿ ಹಾಗೂ ನಿರ್ದಯವಾಗಿ ನಡೆಸಿಕೊಂಡ ರೀತಿ, ಮಾಧ್ಯಮದ ಮೌನ ನಾನು ರಾಜೀನಾಮೆ ನೀಡಲು ಕಾರಣವಾಯಿತು. ಅವರು ಐಎಎಸ್ಗೆ ಸೇರಿದರೂ ವ್ಯವಸ್ಥೆ ಅವರನ್ನು ನಡೆಸಿಕೊಂಡ ರೀತಿ ಮರೆಯಲು ಸಾಧ್ಯವಿಲ್ಲ’’ ಎಂದು ಕಣ್ಣನ್ ಹೇಳಿದ್ದಾರೆ.
ಫೈಸಲ್ ಅವರ ಯಾಕೆ ಈ ನಿರ್ಧಾರ ತೆಗೆದುಕೊಂಡರು ಎಂದು ನಾನು ನಿರ್ಧರಿಸುವುದಿಲ್ಲ. ಆದರೆ, ಸರಕಾರದ ಪ್ರಜಾತಾಂತ್ರಿಕ ವಿಶ್ವಸನೀಯತೆ ಹದಗೆಡುತ್ತಿರುವ ಬಗ್ಗೆ ನನಗೆ ತಿಳಿದಿದೆ ಎಂದು ಅವರು ಹೇಳಿದರು.
‘‘ನಾನು ನನಗಾಗಿ ರಾಜೀನಾಮೆ ನೀಡಿದೆ. ನಾನು ಭಾಗವಾಗಿರುವ ವ್ಯವಸ್ಥೆ ಶಾ ಫೈಸಲ್ ಅವರಂತವರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ನಾನು ನೋಡಿದೆ. ಅದನ್ನು ನನಗೆ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದರು.
ಪ್ರಜಾತಾಂತ್ರಿಕ ವಿಶ್ವಸನೀಯತೆ ಅಲ್ಲಿಂದ ಹದಗೆಡುತ್ತಾ ಬಂದಿದೆ. ಆದುದರಿಂದ ನಾನು ಸರಕಾರಕ್ಕೆ ಮರು ಸೇರುವ ಪ್ರಶ್ನೆಯೇ ಇಲ್ಲ ಎಂದು ಕಣ್ಣನ್ ಗೋಪಿನಾಥನ್ ಹೇಳಿದ್ದಾರೆ.







