ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆಯ ಆರ್ಭಟ: ಮನೆಗೆ ಹಾನಿ, ನದಿಗಳಲ್ಲಿ ನೀರಿನ ಹರಿವು ಹೆಚ್ಚಳ

ಚಿಕ್ಕಮಗಳೂರು, ಆ.16: ಇತ್ತೀಚೆಗೆ ಜಿಲ್ಲಾದ್ಯಂತ ಅಬ್ಬರಿಸಿದ್ದ ಮಳೆ ಕಳೆದ ಕೆಲ ದಿನಗಳಿಂದ ಬಿಡುವು ನೀಡಿತ್ತು. ಇದೀಗ ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಸುರಿಯಲಾರಂಭಿಸಿದೆ. ಶನಿವಾರದಿಂದ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು, ಮಳೆಯಾರ್ಭಟ ರವಿವಾರವೂ ಮುಂದುವರಿದಿದೆ.
ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಶನಿವಾರ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಅಬ್ಬರ ರವಿವಾರವೂ ಮುಂದುವರಿದ್ದು, ನಿರಂತರ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಮನೆಯೊಂದು ಜಖಂಗೊಂಡಿದೆ. ಗ್ರಾಮದ ಸುಂದರ್ ಪೂಜಾರಿ ಎಂಬವರ ಮನೆ ಶನಿವಾರ ಹಗಲು ರಾತ್ರಿ ಸುರಿದ ಮಳೆಯಿಂದಾಗಿ ರವಿವಾರ ಮುಂಜಾನೆ ಕುಸಿದಿದ್ದು, ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ಮನೆ ಮಂದಿ ಮನೆಯಲ್ಲೇ ಇದ್ದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮೂಡಿಗೆರೆ ತಾಲೂಕಿನ ಕಿರುಗುಂದ, ಬಣಕಲ್, ಕೊಟ್ಟಿಗೆಹಾರ, ಹಾಂದಿ, ಜಾವಳಿ, ಬಾಳೂರು, ಹಿರೇಬೈಲ್, ಕಳಸ, ಸಂಸೆ, ಕುದುರೆಮುಖ ಸೇರಿದಂತೆ ತಾಲೂಕಿನಾದ್ಯಂತ ರವಿವಾರವೂ ನಿರಂತರವಾಗಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಇತ್ತೀಚೆಗೆ ತುಂಬಿ ಹರಿದು ಇಳಿಮುಖವಾಗಿದ್ದ ಹೇಮಾವತಿ ಹಾಗು ಭದ್ರಾ ನದಿಗಳಲ್ಲಿ ನೀರಿನ ಹರಿವು ಮತ್ತೆ ಏರಿಕೆಯಾಗುತ್ತಿದೆ. ಆದರೆ ಈ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿಲ್ಲವಾದ್ದರಿಂದ ನದಿ ಪಾತ್ರಗಳ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.
ಇನ್ನು ಜಿಲ್ಲೆಯ ಮಲೆನಾಡು ಭಾಗದಲ್ಲಿನ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲೂ ಶನಿವಾರ ಸುರಿಯಲಾರಂಭಿಸಿರುವ ಧಾರಾಕಾರ ಮಳೆ ರವಿವಾರವೂ ಮುಂದುವರಿದಿದ್ದು, ರವಿವಾರ ಬೆಳಗ್ಗೆಯಿಂದ ಸಂಜೆವರೆಗೂ ನಿರಂತರವಾಗಿ ಮಳೆ ಸುರಿಯುತ್ತಿದೆ. ಬಾಳೆಹೊನ್ನೂರು, ಮಾಗುಂಡಿ, ಜಯಪುರ, ಹೇರೂರು, ಬಸರಿಕಟ್ಟೆ, ಕಿಗ್ಗಾ, ಕೆರೆಕಟ್ಟೆ, ನೆಮ್ಮಾರ್ ಸೇರಿದಂತೆ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಪಟ್ಟಣ ವ್ಯಾಪ್ತಿಯಲ್ಲೂ ಶನಿವಾರದಿಂದ ರವಿವಾರ ಸಂಜೆವರೆಗೂ ಧಾರಾಕಾರ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಧಾರಾಕಾರ ಮಳೆಯಿಂದಾಗಿ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿಯಲ್ಲೂ ನೀರಿನ ಹರಿವು ಹೆಚ್ಚುತ್ತಿದೆ.
ಮಲೆನಾಡು ಭಾಗದಲ್ಲಿ ಮಳೆ ಮತ್ತೆ ಆರ್ಭಟಿಸುತ್ತಿರುವುದರಿಂದ ಭತ್ತದ ಗದ್ದೆಗಳ ನಾಟಿ ಕೆಲಸ ಬಿರುಸುಗೊಂಡಿದೆ. ಆದರೆ ಕಾಫಿ, ಅಡಿಕೆ ತೋಟಗಳ ಕೃಷಿ ಚಟುವಟಿಕೆಗಳಿಗೆ ಧಾರಾಕಾರ ಮಳೆ ಅಡ್ಡಿಯನ್ನುಂಟು ಮಾಡಿದೆ. ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಮಲೆನಾಡು ಭಾಗದ ಭದ್ರಾ, ಹೇಮಾವತಿ, ತುಂಗಾ ನದಿಗಳಲ್ಲಿ ನೀರಿನ ಹರಿವು ಮತ್ತೆ ಹೆಚ್ಚುತ್ತಿದ್ದು, ಮಳೆ ಮುಂದುವರಿದಲ್ಲಿ ಈ ನದಿ ಪಾತ್ರಗಳಲ್ಲಿ ಮತ್ತೆ ಪ್ರವಾಹ ಸಂಭವಿಸುವ ಆತಂಕ ಜನರನ್ನು ಕಾಡುತ್ತಿದೆ.
ಇನ್ನು ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲಿ ಕಳೆದ ಎರಡು ದಿನಗಳಿಂದಲೂ ಮೋಡಕವಿದ ವಾತಾವರಣವಿದ್ದು, ಆಗಾಗ್ಗೆ ಸಾಧಾರಣ ಮಳೆಯಾಗುತ್ತಿದೆ. ಚಿಕ್ಕಮಗಳೂರು ನಗರದಲ್ಲಿ ರವಿವಾರ ತುಂತುರು ಮಳೆಯಾಗಿದೆ.
ಮೂಡಿಗೆರೆ ತಾಲ್ಲೂಕಿನ ಕಲ್ಮನೆ ಗ್ರಾಮದ ರವಿ ಎಂಬವರ ಮನೆ ರವಿವಾರದ ಧಾರಾಕರ ಮಳೆಗೆ ಕುಸಿದು ಬಿದ್ದಿದೆ ಕುಟುಂಬ ಸದಸ್ಯರು ಅತಂತ್ರರಾಗಿದ್ದು ನೆರೆ ಮನೆಯಲ್ಲಿ ಅವರು ಆಶ್ರಯ ಪಡೆದಿದ್ದಾರೆ. ರವಿ ಅಂಗವಿಕಲರಾಗಿದ್ದು ರತ್ನಮ್ಮ ಕೂಲಿ ಕೆಲಸ ಮಾಡಿಕೊಂಡು ತಾವು ವಾಸವಾಗಿದ್ದ ಮನೆಯೂ ಮಳೆಯ ಆರ್ಭಟಕ್ಕೆ ಕುಸಿದು ಬಿದ್ದಿದ್ದು, ಜಿಲ್ಲಾಡಳಿತ ನೆರವಿನ ಹಸ್ತ ಚಾಚಿದೆ.







