2.60 ಲಕ್ಷ ರೂ. ಮೌಲ್ಯದ ಕೆಮ್ಮಿನ ಔಷಧ ವಶಕ್ಕೆ: ಓರ್ವನ ಬಂಧನ

ಕೋಲ್ಕತಾ, ಆ.16: ಪಶ್ಚಿಮ ಬಂಗಾಳದ ನವಾಡದಲ್ಲಿ ಭಾರತ-ಬಾಂಗ್ಲಾದೇಶ ಗಡಿಭಾಗದಲ್ಲಿ 2,60,231 ರೂ. ಮೌಲ್ಯದ ಕೆಮ್ಮಿನ ಔಷಧ ಫೆನ್ಸೆಡಿಲಿನ್ ಅನ್ನು ಗಡಿಭದ್ರತಾ ಪಡೆ ಜಪ್ತಿ ಮಾಡಿದ್ದು, ಓರ್ವನನ್ನು ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.
ಫೆನ್ಸೆಡಿಲಿನ್ ಔಷಧವನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇದನ್ನು ದೇಶದೊಳಗೆ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ನವಾಡದ ಗಡಿ ತಪಾಸಣಾ ಕೇಂದ್ರದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ರವಿವಾರ ಬೆಳಿಗ್ಗೆ 7 ಗಂಟೆಗೆ ಬಾಂಗ್ಲಾದಿಂದ ಭಾರತದ ಗಡಿ ದಾಟಿ ಒಳನುಸುಳಲು ಕೆಲವರು ಪ್ರಯತ್ನಿಸಿದಾಗ ಗಡಿ ಭದ್ರತಾ ಪಡೆ ಅದನ್ನು ವಿಫಲಗೊಳಿಸಿದೆ. ಈ ಸಂದರ್ಭ ಫೆನ್ಸೆಡಿಲಿನ್‌ನ 160 ಬಾಟಲಿಯೊಂದಿಗೆ ಓರ್ವ ಭಾರತೀಯನನ್ನು ವಶಕ್ಕೆ ಪಡೆದಿದ್ದು ಇತರರು ಪರಾರಿಯಾಗಿದ್ದಾರೆ.
ಅಂತಾರಾಷ್ಟ್ರೀಯ ಗಡಿ ದಾಟಿಸಿ ಫೆನ್ಸಿಡಿಲ್ ಔಷಧವನ್ನು ಬಾಂಗ್ಲಾದೇಶ ತಲುಪಿಸುವ ಕಾರ್ಯವನ್ನು ಮಾಲ್ಡಾ ನಿವಾಸಿ ಗುರುಪ್ರಸಾದ್ ಮಂಡಲ್ ಎಂಬಾತ ವಹಿಸಿಕೊಂಡಿದ್ದು, ಈ ಕಾರ್ಯಕ್ಕೆ ತನ್ನನ್ನು ನೇಮಿಸಿದ್ದ. ಪ್ರತೀ ಬ್ಯಾಗ್‌ನ ಮೇಲೆ ತನಗೆ 1,200 ರೂ. ಕಮಿಷನ್ ದೊರಕುತ್ತಿತ್ತು. ಬಾಂಗ್ಲಾದಿಂದ ಇತರ ದೇಶಕ್ಕೆ ಇವನ್ನು ರವಾನಿಸುವ ಕೆಲಸವನ್ನು ಸಹೀಮ್ ಶೇಖ್ ಎಂಬಾತ ನಿರ್ವಹಿಸುತ್ತಿದ್ದ ಎಂದು ಬಂಧಿತ ವ್ಯಕ್ತಿ ಮಾಹಿತಿ ನೀಡಿರುವುದಾಗಿ ಗಡಿ ಭದ್ರತಾ ಪಡೆಯ ಅಧಿಕಾರಿಗಳು ಹೇಳಿದ್ದಾರೆ.
ಶನಿವಾರವೂ ಗಡಿಭದ್ರತಾ ಪಡೆಯ ಅಧಿಕಾರಿಗಳು ಫೆನ್ಸೆಡಿಲ್‌ನ 1004 ಬಾಟಲಿಗಳನ್ನು ವಶಕ್ಕೆ ಪಡೆದಿದ್ದರು.







