ಬಿಡೆನ್ ಅಧ್ಯಕ್ಷರಾದಲ್ಲಿ ಭದ್ರತಾ ಮಂಡಳಿಯ ಖಾಯಂ ಸ್ಥಾನ ಪಡೆಯಲು ಭಾರತಕ್ಕೆ ನೆರವು: ಟೋನಿ ಬ್ಲಿಂಕೆನ್ ಭರವಸೆ
ಹೊಸದಿಲ್ಲಿ, ಆ.15: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಬಳಿಕ ಜೋ ಬಿಡೆನ್ ಸರಕಾರವು ಅಸ್ತಿತ್ವಕ್ಕೆ ಬಂದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರೆಯಲು ನೆರವಾಗಲಿದೆಯೆಂದು ಬಿಡೆನ್ ಅವರಿಗೆ ವಿದೇಶಾಂಗ ನೀತಿ ಸಲಹೆಗಾರರಾಗಿರುವ ಟೋನಿ ಬ್ಲಿಂಕೆನ್ ತಿಳಿಸಿದ್ದಾರೆ. ಬಿಡೆನ್ ಅಧ್ಯಕ್ಷರಾದಲ್ಲಿ ಚೀನಾದ ಉದ್ಧಟತನವನ್ನು ಎದುರಿಸಲು ಭಾರತವನ್ನು ಅಮೆರಿಕದ ಪ್ರಮುಖ ಪಾಲುದಾರನಾಗಿ ಪರಿಗಣಿಸಲಾಗುವುದೆಂದು ಅವರು ಹೇಳಿದ್ದಾರೆ.
‘‘ಜೊ ಬಿಡೆನ್ ಆಡಳಿತದಲ್ಲಿ ಅಮೆರಿಕ-ಭಾರತ ಬಾಂಧವ್ಯಗಳು ಮತ್ತು ಭಾರತೀಯ ಅಮೆರಿಕನ್ನರು’’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬ್ಲಿಂಕ್, ಭಾರತದ ಗಡಿಭಾಗ ಸೇರಿದಂತೆ ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಅತಿಕ್ರಮಣವು ಹೆಚ್ಚುತ್ತಿರುವುದನ್ನು ಜಗತ್ತು ಕಾಣುತ್ತಿದೆ ಮತ್ತು ಭಾರತವು ಗಡಿಯಾಚೆಯ ಭಯೋತ್ಪಾದನೆಯ ಬೆದರಿಕೆಯನ್ನು ಕೂಡಾ ಎದುರಿಸುತ್ತಿದೆ ಎಂದರು..
ಒಬಾಮಾ ಆಡಳಿತದ ಕಾಲದಲ್ಲಿಯೂ ಇಂಡೋ-ಫೆಸಿಫಿಕ್ ಪ್ರದೇಶದ ಕಾರ್ಯತಂತ್ರದಲ್ಲಿ ಭಾರತವನ್ನು ಪ್ರಮುಖ ಸದಸ್ಯನ ಸ್ಥಾನ ನೀಡಲು ನಾವು ಶ್ರಮಿಸಿದ್ದವು ಎಂದವರು ಹೇಳಿದರು.





