ಜೊಲ್ಲುರಸದ ಮೂಲಕ ಕೋವಿಡ್-19 ಸೋಂಕು ಪತ್ತೆ ಪರೀಕ್ಷೆಗೆ ಅಮೆರಿಕ ಅನುಮತಿ

ಹ್ಯೂಸ್ಟನ್, ಆ.16: ಜೊಲ್ಲು ರಸದ ಮೂಲಕ ಕೋವಿಡ್-19 ರೋಗ ಪತ್ತೆ ಹಚ್ಚುವ ಸಾಮರ್ಥ್ಯವಿರುವ ನೂತನ ಪ್ರಯೋಗಾಲಯದ ತುರ್ತು ಬಳಕೆಗೆ ಅಮೆರಿಕದ ಆರೋಗ್ಯ ಕಣ್ಗಾವಲು ಇಲಾಖೆಯು ಅಧಿಕೃತ ಪರವಾನಗಿ ನೀಡಿದೆ.
ಮಾನವನ ಜೊಲ್ಲುರಸವನ್ನು ಸಂಗ್ರಹಿಸಿ ಕೊರೋನ ವೈರಸ್ ಪತ್ತೆಹಚ್ಚುವ ಈ ವಿನೂತನ ಪ್ರಯೋಗಾಲಯವು ಸೋಂಕಿನ ಪರೀಕ್ಷಾ ವಿಧಾನದಲ್ಲಿ ‘ಗೇಮ್ ಚೇಂಜರ್’ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ. ಇದರಿಂದಾಗಿ ಜನರಲ್ಲಿ ತ್ವರಿತವಾಗಿ ಕೋವಿಡ್-19 ತಪಾಸಣೆಯನ್ನು ನಡೆಸಲು ಸಾಧ್ಯವಾಗಲಿದೆಯೆಂದು ಅವರು ತಿಳಿಸಿದ್ದಾರೆ.
ನೂತನ ಜೊಲ್ಲುರಸ (ಸಲೈವಾ) ಪರೀಕ್ಷಾ ವಿಧಾನಕ್ಕೆ ಸಲೈವಾ ಡೈರೆಕ್ಟ್ ಎಂದು ಹೆಸರಿಡಲಾಗಿದೆ. ಈ ವಿಧಾನವು ಕೊರೋನ ತಪಾಸಣೆಯಲ್ಲಿ ದಕ್ಷತೆಯನ್ನು ಹೆಚ್ಚಿಸಲಿದೆ ಹಾಗೂ ಈ ಸೋಂಕು ರೋಗದ ಪರೀಕ್ಷೆಗೆ ನಿರ್ಣಾಯಕವಾದ ರೀಏಜೆಂಟ್ ಘಟಕಗಳ ಕೊರತೆಯನ್ನು ತಪ್ಪಿಸಲಿದೆ ಎಂದು ಅಮೆರಿಕದ ಆಹಾರ ಹಾಗೂ ಔಷಧಿ ಆಡಳಿತ ಆಯುಕ್ತ ಸ್ಚೀಫನ್ ಹಾನ್ ತಿಳಿಸಿದ್ದಾರೆ.
ಕೊರೋನ ಪರೀಕ್ಷೆಗೆ ಈವರೆಗೆ ಬಳಸಲಾಗುತ್ತಿದ್ದ ಗಂಟಲುದ್ರವ ಪರೀಕ್ಷೆಗೆ ಹೋಲಿಸಿದರೆ ಸಲೈವಾ ಡೈರೆಕ್ಟ್ ಪರೀಕ್ಷೆ ಅತ್ಯಂತ ಸರಳ ಹಾಗೂ ಇದಕ್ಕೆ ತಗಲು ವ ವೆಚ್ಚವೂ ಕಡಿಮೆ ಎಂದವರು ತಿಳಿಸಿದ್ದಾರೆ.







