ಬಸವಣ್ಣ ಪುತ್ಥಳಿಯ ಕೆಳ ಭಾಗದಲ್ಲಿದ್ದ ಇಂಗ್ಲಿಷ್, ಹಿಂದಿ ನಾಮ ಫಲಕ ತೆರವು
ಬೆಂಗಳೂರು, ಆ.17: ನಗರದ ಚಾಲುಕ್ಯ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಬಸವಣ್ಣನವರ ಪುತ್ಥಳಿಯ ಕೆಳ ಭಾಗದಲ್ಲಿದ್ದ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ನಾಮ ಫಲಕವನ್ನು ಬಿಬಿಎಂಪಿ ತೆಗೆದು ಹಾಕಿದೆ.
ಬಸವಣ್ಣನವರ ಪ್ರತಿಮೆ ಸುತ್ತಲೂ ಹಾಗೂ ಕೆಳಭಾಗದ ಕಲ್ಲುಗಳ ಮೇಲೆ ಬಸವಣ್ಣರ ವಚನಗಳನ್ನು ಮೂರು ಭಾಷೆಗಳಲ್ಲಿ ಉಲ್ಲೇಖಿಸಲಾಗಿತ್ತು. ಇದೀಗ, ಮೂರು ಭಾಷೆಗಳಲ್ಲಿ ವಚನಗಳನ್ನ ಉಲ್ಲೇಖಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತ ವಾಗಿತ್ತು.
ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಸವಣ್ಣನವರ ವಚನಗಳನ್ನ ಬರೆಯಲಾಗಿದ್ದು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾದ ಭಾಗಗಳನ್ನ ತೆಗೆಯುವಂತೆ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಕಾರ್ಮಿಕರು ಹಿಂದಿ ಭಾಷೆಯಲ್ಲಿದ್ದ ಭಾಗಗಳಿಗೆ ಪೇಂಟಿಂಗ್ ಮಾಡಿದ್ದಾರೆ.
ಚಾಲುಕ್ಯ ಸರ್ಕಲ್ ಬಳಿ ಸ್ಥಾಪಿಸಲಾಗಿದ್ದ ಬಸವಣ್ಣನವರ ಹಳೇ ವಿಗ್ರಹದ ಜಾಗದಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಬಸವಣ್ಣರ ನೂತನ ಪುತ್ಥಳಿ ನಿರ್ಮಾಣವಾಗಿದ್ದು, ಇದೇ ತಿಂಗಳ 19 ಅಥವಾ 20 ರಂದು ಪ್ರತಿಮೆಯನ್ನ ಅನವಾರಣಗೊಳ್ಳುವ ಸಾಧ್ಯತೆ ಇತ್ತು.