ಆಂಟಿಜಿನ್ ಕಿಟ್ ಬಳಕೆಯಲ್ಲಿ ಕೊಪ್ಪಳ ಪ್ರಥಮ, ಹಿಂದೆ ಉಳಿದ ಬೆಂಗಳೂರು
ಬೆಂಗಳೂರು, ಆ.17: ಆಂಟಿಜಿನ್ ಕಿಟ್ ಬಳಸಿ ಕೋವಿಡ್ ತಪಾಸಣೆ ಮಾಡುವಲ್ಲಿ ರಾಜಧಾನಿ ಬೆಂಗಳೂರು ಹಿಂದೆಯಿದ್ದರೆ, ಕೊಪ್ಪಳ ಜಿಲ್ಲೆ ಮುಂದೆ ಇದೆ. ಬಳ್ಳಾರಿ ಹಾಗೂ ಬಾಗಲಕೋಟೆ ಎರಡನೇ ಸ್ಥಾನದಲ್ಲಿದೆ.
ಕೊಪ್ಪಳ (ಶೇ 99) ಸೇರಿದಂತೆ ಎಂಟು ಜಿಲ್ಲೆಗಳಷ್ಟೇ ಶೇ 80ಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆ. ಬೆಂಗಳೂರು ನಗರ (ಶೇ 50) ಮತ್ತು ಅತಿ ದೊಡ್ಡ ಜಿಲ್ಲೆ ಬೆಳಗಾವಿ (ಶೇ 49) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ (ಶೇ 33) ಕಿಟ್‍ಗಳನ್ನು ಬಳಕೆ ಮಾಡಿ ಅತ್ಯಂತ ಹಿಂದೆ ಉಳಿದಿದೆ. ಬೆಂಗಳೂರು ನಗರ ಜಿಲ್ಲೆಗೆ ಅತ್ಯಧಿಕ ಕಿಟ್‍ಗಳನ್ನು ಪೂರೈಸಲಾಗಿದೆ.
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ ಆಗಸ್ಟ್ 14ರವರೆಗೆ 6,94,700 ಕಿಟ್‍ಗಳನ್ನು ವಿತರಿಸಿದ್ದು, 4,64,325 ಮಂದಿಗೆ ತಪಾಸಣೆ ನಡೆಸಲಾಗಿದ್ದು ಶೇ 67ರಷ್ಟು ಕಿಟ್‍ಗಳಷ್ಟೇ ಬಳಕೆಯಾಗಿದೆ.
ಬಳ್ಳಾರಿ ಹಾಗೂ ಬಾಗಲಕೋಟೆ ಶೇ 93ಷ್ಟು ಬಳಕೆ ಮಾಡಿದ್ದರೆ, ವಿಜಯಪುರ ಮತ್ತು ಗದಗ ಶೇ 87 ಬಳಸಿವೆ. ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆ ಶೇ 84ರಷ್ಟು ಕಿಟ್‍ಗಳನ್ನು ಬಳಸಿವೆ. 11 ಜಿಲ್ಲೆಗಳು ಶೇ 70ರಿಂದ 80ರಷ್ಟು ಕಿಟ್‍ಗಳನ್ನು ಬಳಸಿವೆ. 8 ಜಿಲ್ಲೆಗಳು ಶೇ 60ರಿಂದ 70ರಷ್ಟು ಕಿಟ್‍ಗಳನ್ನು ಬಳಸಿದೆ.
ಬಳ್ಳಾರಿ ಜಿಲ್ಲೆಯಕ್ಕಿ ಕಿಟ್‍ಗಳ ಬಳಕೆ ಹೆಚ್ಚಿರುವ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲೆಯಲ್ಲಿ ಹೆಚ್ಚು ಜ್ವರ ತಪಾಸಣೆ ಕೇಂದ್ರಗಳಿದ್ದು, ಎಲ್ಲೆಡೆ ಆಂಟಿಜೆನ್ ಕಿಟ್ ಬಳಸಿ ತಪಾಸಣೆ ನಡೆಸಲಾಗುತ್ತಿದೆ. ಸೋಂಕಿತರೊಂದಿಗೆ ಪ್ರಾಥಮಿಕ ಹಂತದ ಸಂಪರ್ಕ ಹೊಂದಿರುವವರೆಲ್ಲರನ್ನೂ ಪತ್ತೆ ಹಚ್ಚಿ ತಪಾಸಣೆ ನಡೆಸುತ್ತಿರುವುದು ವಿಶೇಷ ಎಂದು ಹೇಳಿದ್ದಾರೆ.
ಟೋಕನ್ ಪದ್ಧತಿ: ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿರುವ ಜ್ವರ ತಪಾಸಣೆ ಕೇಂದ್ರಕ್ಕೆ ಬರುವವರ ಸಂಖ್ಯೆ ಹೆಚ್ಚಿರುವುದರಿಂದ ಟೋಕನ್ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಒಂದು ದಿನ ಮುಂಚೆಯೇ ಕೇಂದ್ರದಲ್ಲಿ ಟೋಕನ್ ಪಡೆಯಬೇಕು. ಟೋಕನ್ ಇಲ್ಲದೆ ಬಂದವರಲ್ಲಿ ಜ್ವರ, ಸುಸ್ತು ಹೆಚ್ಚಿದ್ದರೆ ಕೂಡಲೇ ತಪಾಸಣೆ ಮಾಡುವ ವ್ಯವಸ್ಥೆಯೂ ಇದೆ ಎಂದು ಉಸ್ತುವಾರಿ ಡಾ.ರಾಜಶೇಖರ್ ಗಾಣಿಗೇರ್ ತಿಳಿಸಿದ್ದಾರೆ.







