ಮೂರನೇ ದಿನಕ್ಕೆ ಕಾಲಿಟ್ಟ ಅರೆ ವೈದ್ಯಕೀಯ ಸಿಬ್ಬಂದಿಯಿಂದ ಅನಿರ್ದಿಷ್ಠಾವಧಿ ಪ್ರತಿಭಟನೆ
ಬೆಂಗಳೂರು, ಆ.17: ಬಿಬಿಎಂಪಿ ವ್ಯಾಪ್ತಿಯಲ್ಲಿಕಾರ್ಯ ನಿರ್ವಹಿಸುತ್ತಿರುವ ಅರೆ ವೈದ್ಯಕೀಯ ಸಿಬ್ಬಂದಿ ತಮ್ಮ ಸೇವೆ ಖಾಯಂಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಠಾವಧಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆ ಕಾರ್ಯಕ್ಕೆ ತೀವ್ರ ತೊಂದರೆಯಾಗಿದೆ.
ರಾಷ್ಟ್ರೀಯ ನಗರಆರೋಗ್ಯ ಮಿಷನ್‍ಯೋಜನೆ (ಎನ್‍ಯುಎಚ್‍ಎಂ)ಯಲ್ಲಿಕಾರ್ಯನಿರ್ವಹಿಸುತ್ತಿರುವ ಅರೆ ವೈದ್ಯಕೀಯ ಸಿಬ್ಬಂದಿ ಇಂದು ಮತ್ತೆ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ. ಸೋಮವಾರ 3ನೇ ದಿನಕ್ಕೆ ಕಾಲಿಟ್ಟಿದ್ದು, ನಗರದಲ್ಲಿ ಕೋವಿಡ್ ಪರೀಕ್ಷೆಗೆ ಗಂಟಲು ದ್ರವ ಸಂಗ್ರಹಣೆ, ಪರೀಕ್ಷೆ ವರದಿ ನೀಡುವುದು ಹಾಗೂ ಸೋಂಕಿತರನ್ನುಆಸ್ಪತ್ರೆಗೆ ವರ್ಗಾಯಿಸುವುದು ಸೇರಿ ವಿವಿಧ ಕಾರ್ಯಗಳಿಗೆ ತೊಂದರೆಯಾಗಿದೆ. ಹೀಗಾಗಿ ನಗರದಲ್ಲಿ ಪ್ರತಿ ದಿನಕ್ಕೆ 30 ಸಾವಿರಕ್ಕೂಅಧಿಕ ಕೋವಿಡ್ ಪರೀಕ್ಷೆ ಮಾಡಬೇಕು ಎನ್ನುವ ಬಿಬಿಎಂಪಿ ಗುರಿಗೆ ಹಿನ್ನಡೆಯಾಗಿದೆ.
ಶೇ.70 ಗುತ್ತಿಗೆ ಸಿಬ್ಬಂದಿ ಕಾರ್ಯ: ಪಾಲಿಕೆ ವ್ಯಾಪ್ತಿಯಲ್ಲಿ 135 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 6 ರೆಫರಲ್ ಆಸ್ಪತ್ರೆಗಳು, ಬೆಂಗಳೂರು ನಗರಜಿಲ್ಲಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇ.70ಕ್ಕಿಂತ ಅಧಿಕ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕನಿಷ್ಟ ವೇತನದ ಕೆಲಸಕ್ಕೆ ನಮ್ಮನ್ನು ನೇಮಕ ಮಾಡಿಕೊಂಡಿದ್ದು, ಖಾಯಂ ಸೇವಾ ನೌಕರರಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿಸುತ್ತಿದ್ದಾರೆ. ಇತ್ತೀಚಿಗೆ ಗುತ್ತಿಗೆಗೆ ನೇಮಕ ಮಾಡಿಕೊಂಡ ಸಿಬ್ಬಂದಿಗೆ 20 ಸಾವಿರಗೌರವಧನ ನೀಡುತ್ತಿದ್ದಾರೆ. ಆದರೆ, ಕಳೆದ 5 ವರ್ಷಗಳಿಂದ ಕಾರ್ಯನಿರ್ವಹಿಸುವ ವಿಮಾ ಸೌಲಭ್ಯ ನೀಡದೆ 15 ಸಾವಿರರೂ. ಗೌರವಧನ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.







