ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಒತ್ತಾಯ
ಚಿಕ್ಕಬಳ್ಳಾಪುರ: ಜನಾದೇಶ ಧಿಕ್ಕರಿಸಿ ವಾಮಮಾರ್ಗದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ರಾಜ್ಯ ಬಿಜೆಪಿ ಸರ್ಕಾರವು ಕೊರೋನ ಸಂಕಷ್ಟವನ್ನು ಹಣ ಲೂಟಿ ಹೊಡೆಯವ ಮಾರ್ಗವನ್ನಾಗಿಸಿಕೊಂಡಿದೆ ಎಂದು ಆರೋಪಿಸಿದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಈ ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ರಾಜ್ಯಪಾಲರನ್ನು ಒತ್ತಾಯಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೋನ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಸರ್ಕಾರವು ಕೊರೋನ ಹೆಸರಿನಲ್ಲಿ ರಾಜ್ಯ ಖಜಾನೆಯನ್ನು ಕೊಳ್ಳೆಹೊಡೆಯುತ್ತಿದೆ. ಈ ನಿಟ್ಟಿನಲ್ಲಿ ಕೊರೋನ ನಿಯಂತ್ರಣಕ್ಕಾಗಿ ಸರ್ಕಾರ ಮಾಡಿರುವ ಖರ್ಚು ವೆಚ್ಚಗಳ ಕುರಿತು ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ವಿಧಾನಸಭೆಯಲ್ಲಿ ಚರ್ಚಿಸಿ ಅಂಗೀಕಾರವಾದ ವೇಳೆ, ತುರ್ತು ಪರಿಸ್ಥಿತಿಯಲ್ಲಿ ಜನಪರ ಕಾಯ್ದೆಗಳಿಗೆ ತಿದ್ದುಪಡಿಯನ್ನು ತರಬೇಕು, ಆದರೆ ಕೊರೋನ ಸಂಕಷ್ಟದಲ್ಲಿ ಹಲವು ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಲು ಹೊರಟಿರುವುದು ಖಂಡನೀಯ. ರೈತರು, ಕಾರ್ಮಿಕರಿಗೆ ಮಾರಕವಾಗಲಿರುವ ಕಾಯ್ದೆಗಳ ತಿದ್ದುಪಡಿಯನ್ನು ಕೂಡಲೇ ಕೈಬಿಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ ಮಾತನಾಡಿ, ಸರ್ಕಾರವು ರೈತರು, ಕಾರ್ಮಿಕರ ಹಿತ ಗಾಳಿಗೆ ತೂರಿ, ಕಾಯ್ದೆ ತಿದ್ದುಪಡಿ ಮೂಲಕ ಬಂಡವಾಳ ಶಾಹಿಗಳಿಗೆ ಅನುವು ಮಾಡಿಕೊಡಲು ಹೊರಟಿದೆ. ಅಲ್ಲದೆ ಕೊರೋನ ಸಂಕಷ್ಟದಲ್ಲಿ ರೈತರಿಗೆ ನೀಡುತ್ತಿದ್ದ ಪ್ರತಿ ಲೀ. ಹಾಲಿನ ದರದಲ್ಲಿ 4 ರೂ ಕಡಿತಗೊಳಿಸಿ, ಪಶು ಆಹಾರ ಧರ ಏರಿಸುವ ಮೂಲಕ ರೈತರಿಗೆ ಗಾಯದ ಮೇಲೆ ಬರೆ ಎಳೆಯಲಾಗಿದೆ ಎಂದು ನುಡಿದರು.
ಸುಗ್ರೀವಾಜ್ಞೆಯ ಮೂಲಕ ಭೂಸ್ವಾಧೀನ, ಕಾರ್ಮಿಕ, ಎಪಿಎಂಸಿ ಸೇರಿ ಹಲವು ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಆ.19 ರಂದು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೊರೋನಾ ಮಾರ್ಗಸೂಚಿ ಪಾಲನೆಯೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿವಹಿಸಲು ಕೋರಿದರು.
ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ರಾಜಾಕಾಂತ್, ನಗರಸಭೆ ಸದಸ್ಯರಾದ ವಕೀಲ ಮಟಮಪ್ಪ, ವೀಣಾರಾಮು, ರವಿಕುಮಾರ್ ಇದ್ದರು.







