ಪರಸ್ಪರರನ್ನು ಬೆಂಬಲಿಸುವುದು, ಗೌರವಿಸುವುದು ಮುಖ್ಯ: ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನದ ಭಾಷಣಕ್ಕೆ ಚೀನಾ ಪ್ರತಿಕ್ರಿಯೆ

ಬೀಜಿಂಗ್, ಆ. 17: ಪರಸ್ಪರ ವಿಶ್ವಾಸವನ್ನು ವೃದ್ಧಿಸುವ ಹಾಗೂ ಭಿನ್ನಾಭಿಪ್ರಾಯಗಳನ್ನು ಸೂಕ್ತವಾಗಿ ನಿಭಾಯಿಸುವ ನಿಟ್ಟಿನಲ್ಲಿ ಭಾರತದೊಂದಿಗೆ ಕೆಲಸ ಮಾಡಲು ಚೀನಾ ಸಿದ್ಧವಾಗಿದೆ ಎಂದು ಚೀನಾದ ವಿದೇಶ ಸಚಿವಾಲಯ ಸೋಮವಾರ ತಿಳಿಸಿದೆ. ಮುಂದಕ್ಕೆ ಸಾಗಲು ಉಭಯ ದೇಶಗಳಿಗೆ ಇರುವ ‘ಸರಿಯಾದ ಮಾರ್ಗ’ವೆಂದರೆ ಪರಸ್ಪರರನ್ನು ಗೌರವಿಸುವುದು ಎಂದು ಅದು ಅಭಿಪ್ರಾಯಪಟ್ಟಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣಕ್ಕೆ ಚೀನಾದ ವಿದೇಶ ಸಚಿವಾಲಯವ ಈ ರೀತಿಯಾಗಿ ಪ್ರತಿಕ್ರಿಯಿಸಿದೆ. ಪ್ರಧಾನಿ ಮೋದಿ ತನ್ನ ಭಾಷಣದಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನು ಬಲಪಡಿಸುವ ಬಗ್ಗೆ ಮಾತನಾಡಿದ್ದರು ಹಾಗೂ ದೇಶದ ಪ್ರಾದೇಶಿಕ ಸಮಗ್ರತೆಯು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದರು.
ಜೂನ್‌ನಲ್ಲಿ ಲಡಾಖ್‌ನ ಗಲ್ವಾನ್ ಗಡಿಯಲ್ಲಿ ಭಾರತ ಮತ್ತು ಚೀನಾಗಳ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾದ ಕಡೆಯಲ್ಲೂ ಸಾವು ನೋವುಗಳು ಸಂಭವಿಸಿದೆ ಎಂದು ಹೇಳಲಾಗಿದೆಯಾದರೂ, ಅದು ತನ್ನ ಸೈನಿಕರ ಸಾವು-ನೋವುಗಳ ವಿವರಗಳನ್ನು ಈವರೆಗೆ ಬಹಿರಂಗಪಡಿಸಿಲ್ಲ.
‘‘ಪ್ರಧಾನಿ ಮೋದಿಯ ಭಾಷಣವನ್ನು ನಾವು ಗಮನಿಸಿದ್ದೇವೆ. ನಾವು ನಿಕಟ ನೆರೆಕರೆಯವರು. ನಾವು ನೂರು ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳಾಗಿದ್ದೇವೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು.
ಪ್ರಧಾನಿ ಮೋದಿಯ ಭಾಷಣಕ್ಕೆ ಪ್ರತಿಕ್ರಿಯಿಸುವಂತೆ ಕೇಳಿದಾಗ ಅವರು ಈ ಪ್ರತಿಕ್ರಿಯೆ ನೀಡಿದರು.







