ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ ಪ್ರವಾಹ ಬಂದಿಲ್ಲ: ಡಿಸಿಎಂ ಲಕ್ಷ್ಮಣ ಸವದಿ

ಬೆಳಗಾವಿ, ಆ. 18: ಜಿಲ್ಲೆ ಹಾಗೂ ನೆರೆ ರಾಜ್ಯದಲ್ಲಿ ತೀವ್ರ ಮಳೆಯಾಗುತ್ತಿದೆ. ಅಲ್ಲದೆ, ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಆಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಈವರೆಗೆ ಪ್ರವಾಹ ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈವರೆಗೆ ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿಯ ಒಳಹರಿವು 3 ಲಕ್ಷ ಆದರೆ ಮಾತ್ರ ನದಿಪಾತ್ರದಲ್ಲಿ ಪ್ರವಾಹದ ಆತಂಕ ಇರುತ್ತದೆ. ಪ್ರತಿವರ್ಷ ಬಂದಂತೆ ಪ್ರಸ್ತುತ ವರ್ಷವೂ ನೀರು ಬರುತ್ತಿದೆಯಷ್ಟೆ. ಪ್ರವಾಹ ಬರಬಹುದು ಎಂಬ ಸಂಶಯದಿಂದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಡಳಿತ ಪ್ರವಾಹ ನಿಭಾಯಿಸಲು ಎಲ್ಲ ಕ್ರಮ ಕೈಗೊಂಡಿದೆ. ನದಿಪಾತ್ರದಲ್ಲಿ ಡಂಗೂರ ಹೊಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಜನರು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಜಮೀನಿಗೆ ನೀರು ನುಗ್ಗಿರುವ ಬಗ್ಗೆ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಹಾನಿ ಎಷ್ಟಾಗುತ್ತದೆ. ಅಷ್ಟು ಪರಿಹಾರ ಒದಗಿಸಲು ಸರಕಾರ ಸಿದ್ಧವಿದೆ ಎಂದು ಲಕ್ಷ್ಮಣ ಸವದಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾಂಗ್ರೆಸ್ ಕಾರಣ: ಕಾಂಗ್ರೆಸಿಗರಿಂದಲೇ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆಯಾಗಿದೆ. ಗಲಭೆ ಹುಟ್ಟು ಹಾಕಿದ್ದೇ ಕಾಂಗ್ರೆಸ್ ಕಾರ್ಯಕರ್ತರು. ಇದನ್ನು ಮುಚ್ಚಿ ಹಾಕಲು ಆಡಳಿತ ಪಕ್ಷದ ಮೇಲೆ ಕೈ ಮುಖಂಡರು ಆರೋಪ ಮಾಡುತ್ತಿದ್ದಾರೆ. ನಮ್ಮ ಸರಕಾರದ ಮೇಲೆ ಆರೋಪ ಹೊರೆಸಲು ಕಾಂಗ್ರೆಸ್ ಹುನ್ನಾರ ಮಾಡುತ್ತಿದೆ. ಗೃಹ ಸಚಿವರು, ಪೊಲೀಸರು ಉತ್ತಮ ಕೆಲಸ ಮಾಡುತ್ತಿರುವುದರಿಂದ ಗಲಭೆ ಹತೋಟಿಗೆ ಬಂದಿದೆ ಎಂದರು.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಇಂತಹ ಘಟನೆ ಪುನರಾವರ್ತನೆ ಆಗದಂತೆ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಲಿದೆ. ಆರೋಪಿತರಿಂದಲೇ ಆಸ್ತಿ ಮುಟ್ಟುಗೋಲು ಹಾಕುವ ಸಂಬಂಧ ಸರಕಾರ ಮಟ್ಟದಲ್ಲಿ ಚರ್ಚೆ ನಡೆದಿದೆ. ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆ ನಿಷೇಧ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿ ನಿರ್ಧರಿಸಲಾಗುವುದು ಎಂದು ಲಕ್ಷ್ಮಣ ಸವದಿ ಇದೇ ವೇಳೆ ಸ್ಪಷ್ಟನೆ ನೀಡಿದರು.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಆಗುವುದರಲ್ಲಿ ತಪ್ಪೇನಿಲ್ಲ. ನಮ್ಮ ಪಕ್ಷದವರು ಯಾರೂ ಬೇಕಾದರೂ ಭೇಟಿ ಆಗಬಹುದು. ರಾಜ್ಯದ ಅಭಿವೃದ್ಧಿ ಹಾಗೂ ಇಲಾಖೆ ಸಂಬಂಧ ಚರ್ಚಿಸಲು ರಮೇಶ್ ಜಾರಕಿಹೊಳಿ ದಿಲ್ಲಿಗೆ ತೆರಳಿದ್ದರು ಅಷ್ಟೇ. ಸಚಿವ ಸಂಪುಟ ವಿಸ್ತರಣೆ ಅಧಿಕಾರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇದೆ. ಅವರು ಯಾವಾಗ ಬೇಕಾದರೂ ಸಂಪುಟ ವಿಸ್ತರಣೆ ಮಾಡುವ ನಿರ್ಧಾರ ಕೈಗೊಳ್ಳಬಹುದು'
-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ







