ಬೆಂಗಳೂರು ಹಿಂಸಾಚಾರ: ಅಮಾಯಕ ಯುವಕರ ಬಿಡುಗಡೆಗೆ ಮುಸ್ಲಿಮ್ ಮುಖಂಡರಿಂದ ಪೊಲೀಸ್ ಆಯುಕ್ತರಿಗೆ ಮನವಿ

ಬೆಂಗಳೂರು, ಆ.18: ಕಾವಲ್ ಭೈರಸಂದ್ರ ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಆದರೆ, ಯಾವುದೇ ತಪ್ಪು ಮಾಡದ, ಅಮಾಯಕ ಯುವಕರು ಬಲಿಯಾಗುವುದಕ್ಕೆ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಪೊಲೀಸರು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕೆಂದು ಕರ್ನಾಟಕ ಮುಸ್ಲಿಮ್ ಮುತ್ತಹಿದಾ ಮಹಾಝ್ ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮಂಗಳವಾರ ನಗರದ ಪೊಲೀಸ್ ಆಯುಕ್ತರ ಕಚೇರಿ ಭೇಟಿ ನೀಡಿದ ಮುಸ್ಲಿಮ್ ಮುಖಂಡರ ನಿಯೋಗ, ಗಲಾಟೆ ಪ್ರಕರಣದಲ್ಲಿ ಅಮಾಯಕ ಯುವಕರನ್ನು ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ. ಮತ್ತೊಂದು ಕಡೆ ಪೋಷಕರಿಗೆ ಮಾಹಿತಿ ನೀಡದೆ, ಯುವಕರನ್ನು ಬಂಧನದಲ್ಲಿಡಲಾಗಿದೆ. ಹೀಗಾಗಿ, ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ, ಪೋಷಕರ ಆತಂಕ ದೂರಗೊಳಿಸಬೇಕೆಂದು ಒತ್ತಾಯಿಸಲಾಯಿತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ನಡೆದ ಘಟನೆ ಖಂಡನೀಯ. ಯಾರು ಸಹ ಕಾನೂನು ಕೈಗೆತ್ತಿಕೊಳ್ಳಬಾರದು. ತಪ್ಪು ಯಾರೇ ಮಾಡಲಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಿ. ಆದರೆ, ಘಟನೆಯಲ್ಲಿ ಭಾಗಿಯಾಗದ ಯುವಕರನ್ನು ಗುರಿಯಾಗಿಸಿಕೊಂಡು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡುವ ಜೊತೆಗೆ, ತಪ್ಪು ಎಸಗದ ಯುವಕರನ್ನು ವಿಚಾರಣೆ ನಡೆಸಿ, ಬಿಡಬೇಕೆಂದು ಅವರು ಕೋರಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಶಾಸಕರಾದ ತನ್ವೀರ್ ಸೇಠ್, ಎನ್.ಎ.ಹಾರೀಸ್, ವಿಧಾನ ಪರಿಷತ್ ಸದಸ್ಯ ಸಿ.ಎ.ಇಬ್ರಾಹೀಂ, ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಾದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಸಿಎಂಗೆ ಮನವಿ
ಗಲಾಟೆ ಪ್ರಕರಣ ಸಂಬಂಧ ಆ.20ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಕ್ರಿಮಿನಲ್ ಹಿನ್ನೆಲೆ ಇರುವ ಆರೋಪಿಗಳನ್ನು ಬಂಧಿಸಬೇಕು. ಆದರೆ, ಅಪ್ರಾಪ್ತ, ಅಮಾಯಕರನ್ನು ವಶಕ್ಕೆ ಪಡೆಯುವುದು ಸರಿಯಲ್ಲ.
-ಸಿ.ಎಂ.ಇಬ್ರಾಹೀಂ, ಮಾಜಿ ಸಚಿವ







