ತಪ್ಪಿತಸ್ಥರಿಂದ ಆಸ್ತಿ ಜಪ್ತಿಗೆ ನಿರ್ಧಾರ: ಕ್ಲೇಮ್ ಲಿಟಿಗೇಷನ್ ಆಫೀಸರ್ ಆಗಿ ಹಿರಿಯ ಅಧಿಕಾರಿ ಜಗದೀಶ್ ನೇಮಕ
ಬೆಂಗಳೂರು ಹಿಂಸಾಚಾರ ಪ್ರಕರಣ

ಬೆಂಗಳೂರು, ಆ. 18: ದೇವರಜೀವನಹಳ್ಳಿ(ಡಿ.ಜೆ.ಹಳ್ಳಿ) ಮತ್ತು ಕಾಡುಗೊಂಡನಹಳ್ಳಿ(ಕೆ.ಜಿ.ಹಳ್ಳಿ) ಗಲಭೆಯಿಂದ ಆಗಿರುವ ಆಸ್ತಿ ನಷ್ಟವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಲು ರಾಜ್ಯ ಸರಕಾರ ಕ್ಲೇಮ್ ಲಿಟಿಗೇಷನ್ ಆಫೀಸರ್ ಆಗಿ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ(ಎಐಜಿಪಿ) ಕೆ.ಜಿ.ಜಗದೀಶ್ ನೇಮಕ ಮಾಡಿ ಮಂಗಳವಾರ ಆದೇಶ ಹೊರಡಿಸಲಾಗಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಕ್ಲೇಮ್ ಲಿಟಿಗೇಷನ್ ಆಫೀಸರ್ ನೇಮಕ ಮಾಡಲು ತೀರ್ಮಾನಿಸಿದ್ದು, ಹೈಕೋರ್ಟ್ ಗೆ ಮನವಿ ಸಲ್ಲಿಸಲು ಉದ್ದೇಶಿಸಲಾಗಿತ್ತು. ಅದರಂತೆ ಮಂಗಳವಾರ ಹೈಕೋರ್ಟ್ ಗೆ ಮನವಿ ಮಾಡಿ ಅನುಮತಿ ಪಡೆದುಕೊಳ್ಳಲಾಗಿದೆ ಎಂದು ಗೊತ್ತಾಗಿದೆ.
ಹೈಕೋರ್ಟ್ ಅನುಮತಿ ಮೇರೆಗೆ ಎಐಜಿಪಿ ಕೆ.ಜಿ.ಜಗದೀಶ್ ಅವರನ್ನು ಕ್ಲೇಮ್ ಲಿಟಿಗೇಷನ್ ಆಫೀಸರ್ ಆಗಿ ನೇಮಕ ಮಾಡಿ ಗೃಹ ಇಲಾಖೆ ಆದೇಶಿಸಿದೆ. ಜಗದೀಶ್ ಅವರು ಬುಧವಾರದಿಂದ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಲಿದ್ದಾರೆ. ಗಲಭೆಯಲ್ಲಿ ಹಾನಿಯಾಗಿರುವ ಆಸ್ತಿ-ಪಾಸ್ತಿ ಮೌಲ್ಯದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ತರುವಾಯ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.
ಸರಕಾರ ಗಲಭೆಯಲ್ಲಿ ಪಾಲ್ಗೊಂಡರಿಂದ ನಷ್ಟವನ್ನು ವಸೂಲಿ ಮಾಡಿ ಸಂತ್ರಸ್ತರಿಗೆ ನೀಡಲಾಗುತ್ತದೆ. ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಗಲಭೆಕೋರರು ಬೆಂಕಿ ಹಚ್ಚಿ ಹಾನಿಯನ್ನುಂಟು ಮಾಡಿದ್ದರು. ಇದೇ ವೇಳೆ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹೆಚ್ಚಿದ್ದಲ್ಲದೆ, ಪೊಲೀಸರು ವಾಹನಗಳು ಸೇರಿದಂತೆ ಹಲವು ವಾಹನಗಳನ್ನು ಸುಟ್ಟುಹಾಕಿದ್ದರು.







