ಚೀನಾದೊಂದಿಗೆ ಉದ್ವಿಗ್ನತೆಯ ನಡುವೆಯೇ ಪಾಕ್ ಗಡಿಯ ಬಳಿ ತೇಜಸ್ ಯುದ್ಧವಿಮಾನ ನಿಯೋಜನೆ

ಫೈಲ್ ಚಿತ್ರ
ಹೊಸದಿಲ್ಲಿ,ಆ.18: ಮಹತ್ವ ಬೆಳವಣಿಗೆಯೊಂದರಲ್ಲಿ ಭಾರತೀಯ ವಾಯುಪಡೆಯು ಲಡಾಖ್ ಗಡಿಯಲ್ಲಿ ಚೀನಾದೊಂದಿಗಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನ ಗಡಿ ಬಳಿ ಪಶ್ಚಿಮ ಮುಂಚೂಣಿಯಲ್ಲಿ ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನಗಳನ್ನು ನಿಯೋಜಿಸಿದೆ.
ಚೀನಾದೊಂದಿಗಿನ ಉದ್ವಿಗ್ನತೆಯ ಲಾಭ ಪಡೆದುಕೊಂಡು ಪಾಕಿಸ್ತಾನವು ಯಾವುದೇ ಕೃತ್ಯಕ್ಕೆ ಮುಂದಾಗುವುದನ್ನು ತಡೆಯಲು ದಕ್ಷಿಣ ವಾಯು ಕಮಾಂಡ್ನ ಸೂಲುರ್ ನೆಲೆಯಿಂದ ತೇಜಸ್ ವಿಮಾನಗಳ ಮೊದಲ ಸ್ಕ್ವಾಡ್ರನ್ ಆಗಿರುವ 45 ಸ್ಕ್ವಾಡ್ರನ್ ನ್ನು ಪಾಕ್ ಗಡಿಯ ಬಳಿ ನಿಯೋಜಿಸಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿದವು. ಎರಡನೇ ಸ್ಕ್ವಾಡ್ರನ್ ಆಗಿ 18 ಸ್ಕ್ವಾಡ್ರನ್ ಅನ್ನು ಮುಂದಿನ ದಿನಗಳಲ್ಲಿ ನಿಯೋಜಿಸಲಾಗುತ್ತದೆ ಎಂದವು.
ತನ್ನ ಸ್ವಾತಂತ್ರೋತ್ಸವ ಭಾಷಣದಲ್ಲಿ ತೇಜಸ್ ವಿಮಾನಗಳ ಸಾಮರ್ಥ್ಯವನ್ನು ಪ್ರಶಂಸಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು,ತೇಜಸ್ ಎಲ್ಸಿಎ ಮಾರ್ಕ್ 1ಎ ಆವೃತ್ತಿಯನ್ನು ಖರೀದಿಸುವ ಒಪ್ಪಂದವನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದರು.
ಭಾರತೀಯ ವಾಯುಪಡೆ ಮತ್ತು ರಕ್ಷಣಾ ಸಚಿವಾಲಯ 83 ಮಾರ್ಕ್ 1ಎ ವಿಮಾನಗಳ ಖರೀದಿಗಾಗಿ ಒಪ್ಪಂದವನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಗಡಿಗಳಲ್ಲಿ ಚೀನಿ ಆಕ್ರಮಣಗಳ ಹಿನ್ನೆಲೆಯಲ್ಲಿ ವಾಯುಪಡೆಯು ಚೀನಾ ಮತ್ತು ಪಾಕಿಸ್ತಾನ ಗಡಿಗಳುದ್ದಕ್ಕೂ ತನ್ನ ಯುದ್ಧವಿಮಾನಗಳನ್ನು ನಿಯೋಜಿಸಿದೆ.
ಮುಂಚೂಣಿಯಲ್ಲಿರುವ ವಾಯನೆಲೆಗಳನ್ನು ಪಶ್ಚಿಮ ಮತ್ತು ಉತ್ತರದ ಗಡಿಗಳಲ್ಲಿಯ ಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿಸಲಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಭಾರತೀಯ ಯುದ್ಧವಿಮಾನಗಳು ಹಗಲು ಮತ್ತು ರಾತ್ರಿ ಕಾರ್ಯಾಚರಣೆಗಳು ಸೇರಿದಂತೆ ತೀವ್ರ ಹಾರಾಟವನ್ನು ನಡೆಸಿವೆ.







