ದ್ವಿಪಕ್ಷೀಯ ವಿಮಾನ ಪ್ರಯಾಣ ವ್ಯವಸ್ಥೆ ಆರಂಭಿಸಲು 13 ದೇಶಗಳೊಂದಿಗೆ ಚರ್ಚೆ: ಕೇಂದ್ರ

ಹೊಸದಿಲ್ಲಿ, ಆ.18: ಕೊರೋನ ಸೋಂಕಿನ ಮಧ್ಯೆಯೇ, ಅಂತರಾಷ್ಟ್ರೀಯ ವಿಮಾನಯಾನ ಸಂಚಾರದ ನಿಟ್ಟಿನಲ್ಲಿ ದ್ವಿಪಕ್ಷೀಯ ವಿಮಾನ ಪ್ರಯಾಣ ವ್ಯವಸ್ಥೆಯನ್ನು ಪುನರಾರಂಭಿಸುವ ಬಗ್ಗೆ 13 ದೇಶಗಳೊಂದಿಗೆ ಮಾತುಕತೆ ಮುಂದುವರಿದಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಹೇಳಿದ್ದಾರೆ.
ವಾಣಿಜ್ಯ ವಿಮಾನ ಸಂಚಾರವನ್ನು ಕೊರೋನ ಸೋಂಕಿಗಿಂತ ಹಿಂದೆ ಇದ್ದ ಸ್ಥಿತಿಗೆ ತರುವ ಉದ್ದೇಶದಿಂದ ಎರಡು ದೇಶಗಳ ವಿಮಾನ ಯಾನ ಸಂಸ್ಥೆ ಕಾರ್ಯ ನಿರ್ವಹಿಸಬಹುದಾದ ನಿಯಮ ಮತ್ತು ನಿರ್ಬಂಧಗಳನ್ನು ರೂಪಿಸಲಾಗುತ್ತಿದೆ. ನೆರೆಯ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಅಪಘಾನಿಸ್ತಾನ, ನೇಪಾಳ, ಭೂತಾನ್ ದೇಶಗಳೊಂದಿಗೂ ಈ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಸಚಿವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಜುಲೈ ಬಳಿಕ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಯುಎಇ, ಕತರ್ ಮತ್ತು ಮಾಲ್ದೀವ್ಸ್‌ನೊಂದಿಗೆ ಇಂತಹ ವ್ಯವಸ್ಥೆ ಏರ್ಪಟ್ಟಿದೆ. ಈಗ ಈ ಪ್ರಕ್ರಿಯೆಯನ್ನು ಮುಂದುವರಿಸಿ , ಆಸ್ಟ್ರೇಲಿಯಾ, ಇಟಲಿ, ಜಪಾನ್, ನ್ಯೂಝಿಲ್ಯಾಂಡ್, ನೈಜೀರಿಯಾ, ಬಹ್ರೇನ್, ಇಸ್ರೇಲ್, ಕಿನ್ಯಾ, ಫಿಲಿಪ್ಪೀನ್ಸ್, ರಶ್ಯಾ, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ಥೈಲ್ಯಾಂಡ್ ಈ 13 ದೇಶಗಳನ್ನು ಈ ವ್ಯವಸ್ಥೆಯಡಿ ತರಲು ಪ್ರಯತ್ನ ನಡೆಯುತ್ತಿದೆ. ವಿದೇಶದಲ್ಲಿ ಸಿಕ್ಕಿಬಿದ್ದಿರುವ ಪ್ರತಿಯೊಬ್ಬ ಭಾರತೀಯರನ್ನೂ ತಲುಪುವ ಉದ್ದೇಶ ನಮ್ಮದಾಗಿದೆ ಎಂದು ಸಚಿವರು ಹೇಳಿದ್ದಾರೆ.







