ಮಂಗಳೂರು ಅಲ್ಪಸಂಖ್ಯಾತ ಭವನಕ್ಕೆ ಕಲ್ಲೆಸೆತ ಪ್ರಕರಣ: ಆರು ಮಂದಿ ಬಂಧನ

ಫೈಲ್ ಫೋಟೊ
ಮಂಗಳೂರು, ಆ.18: ನಗರದ ಪಾಂಡೇಶ್ವರದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಭವನಕ್ಕೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ನಗರದ ಗೂಡುಶೆಡ್ಡೆ ನಿವಾಸಿ ಧನರಾಜ್ ಶೆಟ್ಟಿ (21), ಎಮ್ಮೆಕೆರೆ ನಿವಾಸಿ ಸುಶಾಂತ್ (20), ಕಂದುಕ ನಿವಾಸಿ ಕಾರ್ತಿಕ್ ಶೆಟ್ಟಿ (26), ಹೊಯ್ಗೆ ಬಝಾರ್ ನಿವಾಸಿಗಳಾದ ಸಾಗರ್ ಬಂಗೇರ (20), ಮನೀಶ್ ಪುತ್ರನ್ (20) ಸೇರಿದಂತೆ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಬಾಲಕನಿಗೆ ನ್ಯಾಯಾಲಯ ಜಾಮೀನು ನೀಡಿದೆ. ಉಳಿದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ
ಮಂಗಳೂರು ನಗರದ ಹೃದಯಭಾಗದ ಪಾಂಡೇಶ್ವರದಲ್ಲಿನ ಮೌಲಾನ ಆಝಾದ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಭವನಕ್ಕೆ ಆ.13ರಂದು ತಡರಾತ್ರಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದರು. ಕಟ್ಟಡದ ಮೊದಲ ಮಹಡಿಯಲ್ಲಿನ ಮೂರು ಕಿಟಕಿಯ ಗಾಜುಗಳನ್ನು ದುಷ್ಕರ್ಮಿಗಳು ಪುಡಿಗೈದಿದ್ದರು. ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಟ್ಟಡದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್ಗಳನ್ನು ಪೊಲೀಸರು ಕೂಲಂಕಶವಾಗಿ ಪರಿಶೀಲನೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.







