‘ಮಂಗಳೂರು ದಕ್ಕೆಗೆ ಸಾರ್ವಜನಿಕರ ಕಡಿವಾಣ ಅಗತ್ಯ’
ಮಂಗಳೂರು, ಆ.18: ಮೀನುಗಾರಿಕೆ ಆರಂಭವಾದ ಬಳಿಕ ಮಂಗಳೂರು ದಕ್ಕೆಗೆ ಸಾರ್ವಜನಿಕರ ಆಗಮನಕ್ಕೆ ಕಡಿವಾಣ ಹಾಕಬೇಕು ಎಂದು ಮೀನುಗಾರಿಕಾ ಮುಖಂಡರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಈ ಬಗ್ಗೆ ನಗರದ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ ಮೀನುಗಾರಿಕಾ ಮುಖಂಡರು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು.
‘ದಕ್ಕೆಯಲ್ಲಿ ರಿಟೈಲ್ ವ್ಯಾಪಾರಕ್ಕೆ ಯಾವುದೇ ಅವಕಾಶ ನೀಡಬಾರದು. ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಒಬ್ಬ ವ್ಯಕ್ತಿಗೆ ಕೊರೋನ ಪಾಸಿಟಿವ್ ವರದಿಯಾದರೆ ಸಂಪೂರ್ಣ ಧಕ್ಕೆಯನ್ನೇ ಸೀಲ್‌ಡೌನ್ ಮಾಡಬಾರದು’ ಎಂದೂ ಅಧಿಕಾರಿಗಳಲ್ಲಿ ಮೀನುಗಾರಿಕಾ ಮುಖಂಡರು ಮನವಿ ಮಾಡಿದ್ದಾರೆ.
‘ಸುರಕ್ಷಿತ ಅಂತರ ಸವಾಲು’: ‘ಮೀನುಗಾರಿಕೆ ಆರಂಭವಾದ ಬಳಿಕ ಮಂಗಳೂರು ಧಕ್ಕೆಯಲ್ಲಿ ರಿಟೈಲ್ ವ್ಯಾಪಾರದ ಕಾರಣದಿಂದ ಸಾವಿರಾರು ಜನರು ಸೇರುತ್ತಾರೆ. ಹೀಗಾಗಿ ಇಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಸವಾಲು ಕಾಡಲಿದೆ. ಈ ಕಾರಣಕ್ಕಾಗಿ ಇದೇ ಮೊದಲ ಬಾರಿಗೆ ಧಕ್ಕೆ ಯಲ್ಲಿ ರಿಟೈಲ್ ವ್ಯಾಪಾರಕ್ಕೆ ಅನುಮತಿ ನೀಡಬಾರದು’ ಎಂದು ಮೀನುಗಾರ ಮುಖಂಡರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.





