ರೂಪಾಂತರಿಕ ಕೊರೋನ ವೈರಸ್ ಹೆಚ್ಚು ಸಾಂಕ್ರಾಮಿಕ, ಕಡಿಮೆ ಅಪಾಯಕಾರಿ
ಸಿಂಗಾಪುರದ ಸಾಂಕ್ರಾಮಿಕ ರೋಗಗಳ ಪರಿಣತ

ಸಿಂಗಾಪುರ, ಆ. 18: ಯುರೋಪ್‌ನಾದ್ಯಂತ ಸಾಮಾನ್ಯವಾಗಿರುವ ಹಾಗೂ ಇತ್ತೀಚೆಗೆ ಮಲೇಶ್ಯದಲ್ಲಿ ಪತ್ತೆಯಾಗಿರುವ ರೂಪಾಂತರಿತ (ಮ್ಯುಟೇಟಡ್) ನೋವೆಲ್-ಕೊರೋನ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿರಬಹುದು, ಆದರೆ ಅದು ಕಡಿಮೆ ಅಪಾಯಕಾರಿಯೆಂಬಂತೆ ಗೋಚರಿಸಿದೆ ಎಂದು ಸಿಂಗಾಪುರದ ಖ್ಯಾತ ಸಾಂಕ್ರಾಮಿಕ ರೋಗಗಳ ವೈದ್ಯರೊಬ್ಬರು ಹೇಳಿದ್ದಾರೆ.
ಇತ್ತೀಚೆಗೆ ಮಲೇಶ್ಯದಲ್ಲಿ ಪತ್ತೆಯಾಗಿರುವ ‘ಡಿ614ಜಿ’ ಎಂಬ ರೂಪಾಂತರಿತ ಕೊರೋನ ವೈರಸ್ ಪ್ರಭೇದವು ಸಿಂಗಾಪುರದಲ್ಲೂ ಪತ್ತೆಯಾಗಿದೆ ಎಂದು ಸಿಂಗಾಪುರ ನ್ಯಾಶನಲ್ ಯೂನಿವರ್ಸಿಟಿಯಲ್ಲಿ ಹಿರಿಯ ಸಲಹೆಗಾರ ಹಾಗೂ ಅಮೆರಿಕದ ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ಇನ್‌ಫೆಕ್ಶಿಯಸ್ ಡಿಸೀಸಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪೌಲ್ ಟಾಂಬ್ಯಾ ತಿಳಿಸಿದ್ದಾರೆ.
ಯುರೋಪ್‌ನಲ್ಲಿ ರೂಪಾಂತರಿತ ಕೊರೋನ ವೈರಸ್‌ನ ಹರಡುವಿಕೆ ಹೆಚ್ಚಿದಂತೆಯೇ, ಸಾವಿನ ದರದಲ್ಲಿ ಇಳಿಕೆಯಾಗಿರುವುದಕ್ಕೆ ಪುರಾವೆಯಿದೆ ಎಂದು ಅವರು ನುಡಿದರು. ಇದು ರೂಪಾಂತರಿತ ಕೊರೋನ ವೈರಸ್ ಪ್ರಭೇದವು ಕಡಿಮೆ ಮಾರಕ ಎನ್ನುವುದನ್ನು ಸಾಬೀತುಪಡಿಸುತ್ತದೆ ಎಂದರು.
ಕೊರೋನ ವೈರಸ್‌ನ ರೂಪಾಂತರವು ಈಗ ಅಭಿವೃದ್ಧಿಪಡಿಸಲಾಗುತ್ತಿರುವ ಲಸಿಕೆಯ ಪರಿಣಾಮಕಾರಿತ್ವದ ಮೇಲೆ ಪರಿಣಾಮ ಬೀರಬಹುದು ಎಂಬ ಭೀತಿಯನ್ನು ಇತರ ಆರೋಗ್ಯ ಪರಿಣತರು ವ್ಯಕ್ತಪಡಿಸಿದ್ದಾರೆ. ಆದರೆ. ಈ ರೀತಿ ಆಗುವ ಸಾಧ್ಯತೆಯಿಲ್ಲ ಎಂದು ಪೌಲ್ ಟಾಂಬ್ಯಾ ಅಭಿಪ್ರಾಯಪಡುತ್ತಾರೆ.
‘‘ಬಹುಷಃ, ಹೆಚ್ಚು ಸಾಂಕ್ರಾಮಿಕ, ಆದರೆ ಕಡಿಮೆ ಮಾರಕವಾಗಿರುವ ಕೊರೋನ ವೈರಸ್ ಅಭಿವೃದ್ಧಿಯಾಗುತ್ತಿರುವುದು ಶುಭ ಸಮಾಚಾರ’’ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.
ವೈರಸ್‌ನ ಹಿತದೃಷ್ಟಿಯಿಂದಲೂ ಒಳ್ಳೆಯದು!
ಸಾಮಾನ್ಯವಾಗಿ ಹೆಚ್ಚಿನ ವೈರಸ್‌ಗಳು ರೂಪಾಂತರ ಹೊಂದಿದ ಬಳಿಕ ಕಡಿಮೆ ಅಪಾಯಕಾರಿಯಾಗಿರುತ್ತವೆ ಎಂದು ಪೌಲ್ ಟಾಂಬ್ಯಾ ತಿಳಿಸಿದರು.
‘‘ಹೆಚ್ಚೆಚ್ಚು ಜನರಿಗೆ ಸೋಂಕು ಹರಡುವುದು, ಆದರೆ ಅವರನ್ನು ಕೊಲ್ಲದಿರುವುದು ವೈರಸ್‌ನ ಹಿತದೃಷ್ಟಿಯಿಂದ ಒಳ್ಳೆಯದು. ಯಾಕೆಂದರೆ, ವೈರಸ್‌ಗಳು ಆಹಾರ ಮತ್ತು ಆಶ್ರಯಕ್ಕಾಗಿ ಇತರ ಜೀವಿಗಳನ್ನು ಅವಲಂಬಿಸುತ್ತವೆ. ಆ ಜೀವಿಗಳನ್ನು ಕೊಂದರೆ ವೈರಸ್‌ಗಳಿಗೇ ನಷ್ಟ’’ ಎಂದು ಅವರು ಅಭಿಪ್ರಾಯಪಟ್ಟರು.
50 ವರ್ಷಕ್ಕಿಂತ ಕೆಳಗಿನವರು ಕೊರೋನ ಹರಡುತ್ತಿದ್ದಾರೆ: ವಿಶ್ವ ಆರೋಗ್ಯ ಸಂಸ್ಥೆ ಕಳವಳ
ನೋವೆಲ್ ಕೊರೋನ ವೈರಸನ್ನು ಪ್ರಮುಖವಾಗಿ 20, 30 ಮತ್ತು 40 ವರ್ಷದ ಆಸುಪಾಸಿನಲ್ಲಿರುವ ವ್ಯಕ್ತಿಗಳು ಹರಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಂಗಳವಾರ ಹೇಳಿದೆ. ಈ ಪೈಕಿ ಹೆಚ್ಚಿನವರಿಗೆ ತಾವು ರೋಗದ ಸೋಂಕಿಗೆ ಒಳಗಾಗಿರುವುದೇ ತಿಳಿದಿರುವುದಿಲ್ಲ ಹಾಗೂ ಆ ಮೂಲಕ ಅವರು ಹೆಚ್ಚು ಅಪಾಯಕ್ಕೆ ಒಳಗಾಗುವ ಜನರ ಗುಂಪುಗಳಿಗೆ ದೊಡ್ಡ ಬೆದರಿಕೆಯಾಗಿದ್ದಾರೆ ಎಂಬ ಕಳವಳವನ್ನು ಅದು ವ್ಯಕ್ತಪಡಿಸಿದೆ.
ಜಾಗತಿಕ ಮಟ್ಟದಲ್ಲಿ, ಸೋಂಕಿಗೆ ಒಳಗಾಗುವ ಜನರ ಪೈಕಿ ಯುವ ಜನರ ಪ್ರಮಾಣವು ಗಮನಾರ್ಹವಾಗಿ ಹೆಚ್ಚಿದೆ ಎಂದು ಈ ತಿಂಗಳು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. ಇದರಿಂದಾಗಿ, ದುರ್ಬಲ ಆರೋಗ್ಯ ಸೇವೆ ವ್ಯವಸ್ಥೆಗಳಿರುವ ಜನಭರಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ವೃದ್ಧರು ಮತು ರೋಗಿಗಳು ಸೇರಿದಂತೆ ಜಗತ್ತಿನಾದ್ಯಂತ ಇರುವ ದುರ್ಬಲ ರೋಗನಿರೋಧಕ ವ್ಯವಸ್ಥೆಯಿರುವ ಜನರು ಹೆಚ್ಚಿನ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
‘‘ಸಾಂಕ್ರಾಮಿಕ ರೋಗವು ಬದಲಾಗುತ್ತಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪೆಸಿಫಿಕ್ ಪ್ರಾದೇಶಿಕ ನಿರ್ದೇಶಕ ಟಕೆಶಿ ಕಸೈ ಅಶರೀರ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು.
‘‘20, 30 ಮತ್ತು 40 ವರ್ಷದ ಆಸುಪಾಸುಗಳಲ್ಲಿರುವ ಜನರು ಈ ಸಾಂಕ್ರಾಮಿಕವನ್ನು ಹೆಚ್ಚೆಚ್ಚಾಗಿ ಹರಡುತ್ತಿದ್ದಾರೆ. ಹೆಚ್ಚಿನವರಿಗೆ ತಾವು ಕೊರೋನ ವೈರಸ್ ಸೋಂಕಿಗೆ ಒಳಗಾಗಿರುವುದು ಗೊತ್ತೇ ಇಲ್ಲ’’ ಎಂದು ಅವರು ನುಡಿದರು.







