ಗ್ರೀನ್‌ಲ್ಯಾಂಡ್‌ನ ಕಳೆದು ಹೋಗಿರುವ ಹಿಮವನ್ನು ತುಂಬುವುದು ಇನ್ನು ಅಸಾಧ್ಯ: ಅಧ್ಯಯನ ವರದಿ
ಕೋಪನ್‌ಹೇಗನ್ (ಡೆನ್ಮಾರ್ಕ್), ಆ. 30: ಗ್ರೀನ್‌ಲ್ಯಾಂಡ್‌ನ ಹಿಮರಾಶಿ ಕರಗುವಿಕೆ ಯಾವ ಮಟ್ಟಕ್ಕೆ ತಲುಪಿದೆಯೆಂದರೆ, ಇನ್ನು ಅದನ್ನು ಮೂಲಸ್ಥಿತಿಗೆ ತರುವುದು ಸಾಧ್ಯವೇ ಇಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಒಂದು ವೇಳೆ, ಜಾಗತಿಕ ತಾಪಮಾನವು ಇಂದೇ ನಿಂತರೂ, ಅಲ್ಲಿ ನಷ್ಟವಾಗಿರುವ ಹಿಮವನ್ನು ತುಂಬುವುದು ಇನ್ನು ಮುಂದೆ ಯಾವುದೇ ಪ್ರಮಾಣದ ಹಿಮಪಾತಕ್ಕೂ ಸಾಧ್ಯವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘‘ಹಿಮರಾಶಿಯ ಕರಗಿ ಹೋಗಿರುವ ಹಿಮವನ್ನು ಪ್ರತಿ ವರ್ಷ ಹಿಮಪಾತವು ತುಂಬುತ್ತದೆ. ಆದರೆ, ಈಗ ಗ್ರೀನ್‌ಲ್ಯಾಂಡ್‌ನ ಹಿಮರಾಶಿಗಳು ಯಾವ ಪ್ರಮಾಣದಲ್ಲಿ ಕರಗುತ್ತಿವೆಯೆಂದರೆ, ಅವುಗಳಿಂದ ಸಾಗರಗಳಿಗೆ ಹರಿಯುತ್ತಿರುವ ಹಿಮದ ಪ್ರಮಾಣಕ್ಕೆ ಸರಿಗಟ್ಟಲು ಹಿಮಪಾತಗಳಿಗೆ ಆಗುತ್ತಿಲ್ಲ’’ ಎಂದು ಓಹಿಯೊ ಸ್ಟೇಟ್ ವಿಶ್ವವಿದ್ಯಾನಿಲಯ ಹೇಳಿಕೆಯೊಂದು ತಿಳಿಸಿದೆ.
ಇದಕ್ಕೆ ಸಂಬಂಧಿಸಿದ ಅಧ್ಯಯನ ವರದಿಯೊಂದು ಆಗಸ್ಟ್ 13ರಂದು ‘ಕಮ್ಯುನಿಕೇಶನ್ಸ್ ಅರ್ತ್ ಆ್ಯಂಡ್ ಎನ್ವಿರಾನ್‌ಮೆಂಟ್’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಈ ಅಧ್ಯಯನದಲ್ಲಿ ಭಾಗಿಯಾಗಿರುವ ಹೆಚ್ಚಿನ ಸಂಶೋಧಕರು ಓಹಿಯೊ ಸ್ಟೇಟ್ ವಿಶ್ವವಿದ್ಯಾನಿಲಯದವರು.
ಹವಾಮಾನ ಬದಲಾವಣೆಯು ಜಗತ್ತಿನ ಹಿಮರಾಶಿಗಳ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರುತ್ತಿದೆ. ಹಿಮರಾಶಿಗಳ
ಕರಗುವಿಕೆಯು ಜಗತ್ತಿನಾದ್ಯಂತದ ಕೋಟ್ಯಂತರ ಜನರಿಗೆ ಬೆದರಿಕೆಯಾಗಿ ಪರಿಣಮಿಸಿದೆ.
1980 ಮತ್ತು 1990ರ ದಶಕಗಳಲ್ಲಿ ಪ್ರತಿ ವರ್ಷ ಗ್ರೀನ್‌ಲ್ಯಾಂಡ್‌ನ ಹಿಮರಾಶಿಯಿಂದ ಸುಮಾರು 45,000 ಕೋಟಿ ಟನ್ ಹಿಮ ಕರಗುತ್ತಿತ್ತು ಹಾಗೂ ಹಿಮಪಾತವು ಅದನ್ನು ತುಂಬುತ್ತಿತ್ತು ಎಂಬುದಾಗಿ 40 ವರ್ಷಗಳ ಅಂಕಿಅಂಶಗಳನ್ನು ಅಧ್ಯಯನ ಮಾಡಿದ ಬಳಿಕ ವಿಜ್ಞಾನಿಗಳು ಹೇಳಿದ್ದಾರೆ.
ಆದರೆ, ಈ ಶತಮಾನದಲ್ಲಿ ಹಿಮರಾಶಿಯ ಕರಗುವಿಕೆಯ ಪ್ರಮಾಣವು ವರ್ಷಕ್ಕೆ 50,000 ಟನ್‌ಗಳಿಗೆ ಏರಿಕೆಯಾಗಿದೆ ಹಾಗೂ ಕಳೆದ ಹೋಗಿರುವ ಹಿಮವನ್ನು ಹಿಮಪಾತವು ಸಾಕಷ್ಟು ಪ್ರಮಾಣದಲ್ಲಿ ತುಂಬಿಸಿಲ್ಲ.