ಭಾರತದೊಂದಿಗಿನ ಗಡಿ ವಿವಾದವನ್ನು ಸೂಕ್ತವಾಗಿ ನಿಭಾಯಿಸುವುದು ಜಿನ್‌ಪಿಂಗ್ ಯೋಜನೆ: ಚೀನಾ

ಬೀಜಿಂಗ್, ಆ. 18: ಗಡಿ ವಿವಾದವನ್ನು ಸೂಕ್ತವಾಗಿ ನಿಭಾಯಿಸುವುದು, ಆದರೆ ಚೀನಾದ ಪ್ರಾದೇಶಿಕ ಸಮಗ್ರತೆಯನ್ನು ಕಾಯ್ದುಕೊಳ್ಳುವುದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ‘ಪ್ರಮುಖ ದೇಶ’ ರಾಜತಾಂತ್ರಿಕತೆಯ ಭಾಗವಾಗಿದೆ ಎಂದು ಚೀನಾದ ವಿದೇಶ ಸಚಿವಾಲಯ ಹೇಳಿದೆ.
ಭಾರತದೊಂದಿಗಿನ ಗಡಿಯುದ್ದಕ್ಕೂ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳುವುದು, ದಕ್ಷಿಣ ಚೀನಾ ಸಮುದ್ರದಲ್ಲಿನ ಜಲಗಡಿ ಪರಿಸ್ಥಿತಿಯನ್ನು ನಿಭಾಯಿಸುವಷ್ಟೇ ಮಹತ್ವದ್ದಾಗಿದೆ ಎಂದು ಚೀನಾ ವಿದೇಶ ಸಚಿವಾಲಯವು ತಿಳಿಸಿದೆ. ದಕ್ಷಿಣ ಚೀನಾ ಸಮುದ್ರದಲ್ಲಿನ ದ್ವೀಪಗಳು, ಹವಳ ದಿಬ್ಬಗಳು ಮತ್ತು ಅದರ ಸುತ್ತಲಿನ ಜಲಪ್ರದೇಶಗಳ ಮಾಲೀಕತ್ವದ ವಿಷಯದಲ್ಲಿ ಚೀನಾವು ಹಲವು ದೇಶಗಳೊಂದಿಗೆ ವಿವಾದವನ್ನು ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿನ ಜಿನ್‌ಪಿಂಗ್ ನಡುವಿನ ಅನೌಪಚಾರಿಕ ಸಭೆಗಳ ‘ಹೊಸ ಮಾದರಿ’ಯನ್ನೂ ಸಚಿವಾಲಯವು ಶ್ಲಾಘಿಸಿದೆ.
ಜೂನ್ 15 ರಂದು ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿರುವ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ನಡೆದಿರುವ ಘರ್ಷಣೆಯನ್ನು ಈ ಸಂದರ್ಭದಲ್ಲಿ ಚೀನಾ ವಿದೇಶ ಸಚಿವಾಲಯ ಪ್ರಸ್ತಾಪಿಸಿಲ್ಲ. ಆ ಘರ್ಷಣೆಯಲ್ಲಿ ಭಾರತದ ಕನಿಷ್ಠ 20 ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾದ ಕಡೆಯಲ್ಲೂ ಸಾವು-ನೋವುಗಳು ಸಂಭವಿಸಿದೆಯಾದರೂ, ಅವುಗಳ ಸಂಖ್ಯೆಯನ್ನು ಚೀನಾ ಬಹಿರಂಗಪಡಿಸಿಲ್ಲ.







