ಕಕ್ಷಿದಾರನೇ ಇನ್ನುಮುಂದೆ ನೇರವಾಗಿ ಅರ್ಜಿ ಹಾಕುವಂತಿಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು, ಆ.18: ವಕೀಲರ ನೆರವಿಲ್ಲದೆ ನ್ಯಾಯಾಲಯದಲ್ಲಿ ಕಕ್ಷಿದಾರನೇ ನೇರವಾಗಿ ಪ್ರಕರಣ ದಾಖಲಿಸಿ, ಬಳಿಕ ಪ್ರಕರಣದ ಸಂಬಂಧ ತಾವೇ ಖುದ್ದಾಗಿ ವಾದ ಮಂಡಿಸುತ್ತಿದ್ದ ಪಾರ್ಟಿ-ಇನ್-ಪರ್ಸನ್ ಇನ್ಮುಂದೆ ವಕೀಲರ ಮೂಲಕವೇ ಪ್ರಕರಣ ದಾಖಲಿಸಬೇಕೆಂಬ ಮಹತ್ವದ ಆದೇಶವನ್ನು ಹೈಕೋರ್ಟ್ ಹೊರಡಿಸಿದೆ.
ಮೈಸೂರು ಉಚ್ಚ ನ್ಯಾಯಾಲಯ ಕಾಯ್ದೆ-1884ರ ಸೆಕ್ಷನ್ 19ರ ಅಡಿ ಅಧಿಕಾರ ಚಲಾಯಿಸಿ ರಾಜ್ಯ ಹೈಕೋರ್ಟ್ ಈ ನಿಯಮಗಳನ್ನು ರೂಪಿಸಿದ್ದು, ಇದಕ್ಕೆ ರಾಜ್ಯ ಸರಕಾರವೂ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ಕರ್ನಾಟಕ ಹೈಕೋರ್ಟ್ (ಸ್ವತಃ ಪಕ್ಷಗಾರನ ವಿಚಾರಣಾ ನಡವಳಿಕೆ) ನಿಯಮಗಳು ಅನ್ನು ಜಾರಿ ಮಾಡಿ ಅಧಿಸೂಚನೆ ಹೊರಡಿಸಿದೆ.
ಯಾವುದೇ ಒಂದು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯ ಕೋರಿ ನ್ಯಾಯಾಲಯಕ್ಕೆ ಖುದ್ದಾಗಿ ಅರ್ಜಿ ಸಲ್ಲಿಸಿ, ಬಳಿಕ ವಿಚಾರಣೆಗಳಲ್ಲಿ ಹಾಜರಾಗುವ ಮತ್ತು ಪ್ರಕರಣದಲ್ಲಿ ಪಕ್ಷಗಾರನಾಗಿದ್ದುಕೊಂಡೇ ವಾದಿಸುವ ವ್ಯಕ್ತಿಗೆ ಪಾರ್ಟಿ-ಇನ್-ಪರ್ಸನ್ ಅಥವಾ ಸ್ವತಃ ಪಕ್ಷಗಾರ ಎನ್ನುತ್ತಾರೆ. ಇಂತಹ ಪಕ್ಷಗಾರರು ತಮ್ಮ ಪ್ರಕರಣದಲ್ಲಿ ಮಾತ್ರ ವಕೀಲರ ಮಾದರಿಯಲ್ಲೇ ನ್ಯಾಯಾಲಯಗಳ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದರು. ಹೈಕೋರ್ಟ್ ಜಾರಿ ಮಾಡಿರುವ ಹೊಸ ನಿಯಮಗಳ ಪ್ರಕಾರ ಇವರೀಗ ಹಲವು ನಿಬಂಧನೆಗಳನ್ನು ಪೂರೈಸಬೇಕಿದೆ.
ಪಾರ್ಟಿ-ಇನ್-ಪರ್ಸನ್ ಆಗಿ ಪ್ರಕರಣ ದಾಖಲಿಸುವ ಮುನ್ನ ನೋಟರಿ ಅಥವಾ ಓತ್ ಕಮಿಷನರ್‍ಗಳಿಂದ ತಮ್ಮ ಅರ್ಜಿಯನ್ನು ದೃಢೀಕರಿಸಬೇಕು. ಈ ವೇಳೆ ತಾವೇಕೆ ಪಾರ್ಟಿ-ಇನ್-ಪರ್ಸನ್ ಆಗಿ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದೇವೆ, ವಕೀಲರನ್ನು ಯಾವ ಕಾರಣಕ್ಕಾಗಿ ನಿಯೋಜಿಸಿಕೊಳ್ಳುತ್ತಿಲ್ಲ ಎಂಬ ಬಗ್ಗೆ ಸೂಕ್ತ ಕಾರಣಗಳನ್ನು ವಿವರಿಸಬೇಕು. ಜತೆಗೆ ಇತ್ತೀಚಿನ ಭಾವಚಿತ್ರ ಹೊಂದಿರುವ, ಸಂಪೂರ್ಣ ವಿಳಾಸವುಳ್ಳ ಅಧಿಕೃತ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸಗಳನ್ನು ಲಗತ್ತಿಸಬೇಕು.
ದಾಖಲಿಸುತ್ತಿರುವ ಪ್ರಕರಣದ ವಿವರ ಹಾಗೂ ಪ್ರಸ್ತುತಪಡಿಸುತ್ತಿರುವ ಸಂಗತಿಗಳನ್ನು ವಕೀಲರಿಂದ ಪರಿಶೀಲಿಸಿ ಸಹಿ ಪಡೆದುಕೊಳ್ಳಬೇಕು. ನಂತರ ದೃಢೀಕರಣಗೊಳಿಸಿದ ಅರ್ಜಿಯನ್ನು ಪೂರ್ವಾನುಮತಿ ಪಡೆಯಲು ಅಗತ್ಯವಿರುವ ಅರ್ಜಿಗಳೊಂದಿಗೆ ಸಲ್ಲಿಸಬೇಕು. ಈ ಅರ್ಜಿಯನ್ನು ಪರಿಶೀಲನಾ ಶಾಖೆ (ಸ್ಕ್ರೂಟಿನಿ ಬ್ರಾಂಚ್) ಪರಿಶೀಲಿಸಿ ಪಾರ್ಟಿ-ಇನ್ ಪರ್ಸನ್ ಕಮಿಟಿಗೆ ಸಲ್ಲಿಸಬೇಕು.







