ಆ.21ರಂದು ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶನ: ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ
ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಆರೋಪ

ಮೈಸೂರು,ಆ.18: ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆ.21 ರಂದು ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಿಸಲು ಆಗಮಿಸುತ್ತಿದ್ದು, ಈ ವೇಳೆ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಸ್ವರಾಜ್ ಇಂಡಿಯಾ ಪಕ್ಷ, ಜನಾಂದೋಲನ ಮಹಾಮೈತ್ರಿ ವತಿಯಿಂದ ನಡೆದ ಜಂಟಿ ಪತ್ರಿಕಾಗೋಷ್ಠಯನ್ನುದ್ದೇಶಿಸಿ ಮಾತನಾಡಿದ ಅವರು, ರೈತ ಸಮುದಾಯದಿಂದ ಬೆಳೆದು ಮುಖ್ಯಮಂತ್ರಿಯ ಕುರ್ಚಿ ಗಿಟ್ಟಿಸಿಕೊಂಡಿರುವ ಯಡಿಯೂರಪ್ಪ ಇಂದು ರೈತ ಕುಲಕ್ಕೆ ವಿಷ ಉಣಿಸುತಿದ್ದಾರೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸೇರಿದಂತೆ ಅನೇಕ ರೈತ ವಿರೋಧಿ, ಜನಪರ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ದೊಡ್ಡ ಭ್ರಷ್ಟಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಕೊರೋನ ಸಂಕಷ್ಟದಿಂದ ಜನರು ನರಳುತ್ತಿದ್ದಾರೆ, ಅತೀವೃಷ್ಟಿಯಿಂದ ಹಲವಾರು ಸಾವು ನೋವು ಸಂಭವಿಸಿವೆ. ಕಳೆದ ವರ್ಷ ಪ್ರವಾಹಕ್ಕೀಡಾಗಿ ತತ್ತರಿಸಿ ಹೋಗಿರಯವ ಕುಟುಂಬಗಳಿಗೆ ಇನ್ನೂ ಸರ್ಕಾರ ನ್ಯಾಯ ಒದಗಿಸಿಲ್ಲ, ಇಂತಹ ಪರಿಸ್ಥಿತಿಯಲ್ಲಿ ತುಂಬಿರುವ ಜಲಾಶಯಗಳಿಗೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವುದು ಸರಿಯೇ ಎಂದು ಪ್ರಶ್ನಿಸಿದರು.
ಕೆ.ಆರ್.ಎಸ್ ಜಲಾಶಯದ ಸುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಸಂಬಂಧ ಕಳೆದ ವರ್ಷ ಬಾಗಿನ ಅರ್ಪಿಸಲು ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಣಿಗಾರಿಕೆ ನಿಲ್ಲಿಸಯವುದಾಗಿ ಹೇಳಿದ್ದರು. ಆದರೆ ಇಲ್ಲಿಯ ತನಕವೂ ನಿಲ್ಲಿಸಿಲ್ಲ, ಅಲ್ಲಿ ನಿರಂತರವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯ ವಿರುದ್ಧ ರಾಜ್ಯಾದ್ಯಂತ ನಿರಂತರ ಹೋರಾಟ ನಡೆಯುತಿದ್ದರೂ ಸರ್ಕಾರ ಈ ಬಗ್ಗೆ ಸ್ಪಂದಿಸುತ್ತಿಲ್ಲ. ಇದೊಂದು ಬಕಾಸುರ ಸರ್ಕಾರ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಸೇರಿದಂತೆ ಅನೇಕ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಿಡಿಕಾರಿದರು.
ಆ.21ರಂದು ಕೆ.ಆರ್.ಎಸ್ ಗೆ ಬಾಗಿನ ಅರ್ಪಿಸಲು ಬರುವ ಮುಖ್ಯಮಂತ್ರಿಗಳಿಗೆ ರೈತ ಸಂಘಟನೆಯ ಚಾಮರಸ ಪಾಟೀಲ್, ಬಡಗಲಪುರ ನಾಗೇಂದ್ರ, ಬಿ.ಎನ್.ಕೆಂಪೂಗೌಡ ,ಅಭಿರುಚಿ ಗಣೇಶ್, ದಸಂಸ ವತಿಯಿಂದ ಗುರುಪ್ರಸಾದ್ ಕೆರಗೋಡು, ಎಂ.ರಾಮು ಚನ್ನಪ್ಪಟ್ಟಣ ರಾಮಕೃಷ್ಣಯ್ಯ, ಶಂಭುನಳ್ಳಿ ಸುರೇಶ್ ನೇತೃತ್ವದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು. ಅದೇ ರೀತಿ ಕಬಿನಿ ಜಲಾಶಯಕ್ಕೆ ಆಗಮಿಸುವ ಮುಖ್ಯಮಂತ್ರಿಗಳಿಗೆ ರೈತ ಸಂಘಟನೆಯ ಹೊಸೂರು ಕುಮಾರ್, ಪಿ.ಮರಂಕಯ್ಯ, ಉಗ್ರನರಸಿಂಹೇಗೌಡ, ದಸಂಸ ಮುಖಂಡರುಗಳಾ ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ ನೇತೃತ್ವದಲ್ಲಿ ಅದೇ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಹೇಳಿದರು.







