ಉಡುಪಿ: ಮೂರೇ ದಿನಗಳಲ್ಲಿ 8 ರಿಂದ 9 ಸಾವಿರ ಗಡಿ ದಾಟಿದ ಕೊರೋನ ಪಾಸಿಟಿವ್
ಉಡುಪಿ, ಆ.18: ಜಿಲ್ಲೆಯಲ್ಲಿ ಕೋವಿಡ್-19ಗೆ ಪಾಸಿಟಿವ್ ಬರುತ್ತಿರುವವ ಸಂಖ್ಯೆ ಶರವೇಗದಲ್ಲಿ ಮೇಲಕ್ಕೇರುತ್ತಿದೆ. ಆ.16ರ ರವಿವಾರ 7975 ಇದ್ದ ಪಾಸಿಟಿವ್ ಬಂದವರ ಸಂಖ್ಯೆ ಇಂದು ಬುಧವಾರ 9000ದ ಗಡಿಯನ್ನು ದಾಟಿ ಮುನ್ನಡೆದಿದೆ. ಅಂದರೆ ಕೇವಲ ಮೂರೇ ದಿನಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಕೊರೋನ ಸೋಂಕಿಗೆ ಪಾಸಿಟಿವ್ ಬಂದಂತಾಗಿದೆ.
ಮಂಗಳವಾರ ಕಳೆದ ಆರು ತಿಂಗಳಲ್ಲೇ ಅತ್ಯಧಿಕ (421) ಪಾಸಿಟಿವ್ ಕಂಡ ಉಡುಪಿ ಜಿಲ್ಲೆಯಲ್ಲಿ, ಇಂದು ಮತ್ತೆ 375 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ 9041ನ್ನು ತಲುಪಿದೆ. ಆದರೆ ದಿನದಲ್ಲಿ 1608 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಬುಧವಾರ ಕೋವಿಡ್ ಪಾಸಿಟಿವ್ ಪತ್ತೆಯಾದ 375 ಮಂದಿಯಲ್ಲಿ ಉಡುಪಿ ತಾಲೂಕಿನ 215 ಮಂದಿ, ಕುಂದಾಪುರ ತಾಲೂಕಿನ 131 ಹಾಗೂ ಕಾರ್ಕಳ ತಾಲೂಕಿನ 27 ಮಂದಿ ಸೇರಿದ್ದಾರೆ. ಉಳಿದಂತೆ ಹೊರಜಿಲ್ಲೆಯ ಇಬ್ಬರು ಚಿಕಿತ್ಸೆಗೆ ಇಲ್ಲಿಗೆ ಬಂದು ಪಾಸಿಟಿವ್ ಆಗಿದ್ದಾರೆ. ಮಕ್ಕಳು ಸೇರಿದಂತೆ 195 ಮಂದಿ ಪುರುಷರು ಹಾಗೂ 180 ಮಂದಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 130 ಪುರುಷರು ಹಾಗೂ 146 ಮಹಿಳೆಯರಲ್ಲಿ ರೋಗದ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಾ.ಸೂಡ ತಿಳಿಸಿದರು.
ಇಂದು ಪಾಸಿಟಿವ್ ದೃಢಗೊಂಡ 375 ಮಂದಿಯಲ್ಲಿ 205 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 67 ಮಂದಿ ಶೀತಜ್ವರದಿಂದ, ಐವರು ಉಸಿರಾಟ ತೊಂದರೆಯಿಂದ ಬಳಲುತಿದ್ದು ಸೋಂಕು ಕಾಣಿಸಿಕೊಂಡಿದೆ. ಇನ್ನು ದೇಶೀಯ ಪ್ರವಾಸದಿಂದ ಮರಳಿದ ಐವರಲ್ಲಿ ಸೋಂಕು ಪತ್ತೆ ಯಾಗಿದ್ದು, ಉಳಿದಂತೆ 93 ಮಂದಿಯ ಸೋಂಕಿನ ಸಂಪರ್ಕ ಇನ್ನೂ ಪತ್ತೆಯಾಗಬೇಕಿದೆ ಎಂದರು.
181 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಬುಧವಾರ 181 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 111 ಮಂದಿ ಕೋವಿಡ್ ಆಸ್ಪತ್ರೆಗಳಿಂದ, 70 ಮಂದಿ ಹೋಮ್ ಐಸೋಲೇಷನ್ನಲ್ಲಿದ್ದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 6132 ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 2831 ಮಂದಿ ಇನ್ನೂ ಚಿಕಿತ್ಸೆಯಲ್ಲಿದ್ದು, ಇವರಲ್ಲಿ 1303 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 1528 ಮಂದಿ ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್ಓ ಹೇಳಿದರು.
1597 ಸ್ಯಾಂಪಲ್ ಸಂಗ್ರಹ
ಸೋಂಕಿನ ಪರೀಕ್ಷೆಗಾಗಿ ಬುಧವಾರ 1597 ಮಂದಿಯ ಗಂಟಲುದ್ರವದ ಸ್ಯಾಂಪಲ್ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 1494 ಮಂದಿ, ಕೋವಿಡ್ ಸಂಪರ್ಕಿತರು 65 ಮಂದಿ ಇದ್ದರೆ, ಉಸಿರಾಟ ತೊಂದರೆಯ 12 ಮಂದಿ, ಶೀತಜ್ವರದಿಂದ ಬಳಲುವ 15 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್ಸ್ಪಾಟ್ಗಳಿಂದ ಆಗಮಿಸಿದ 11 ಮಂದಿಯ ಸ್ಯಾಂಪಲ್ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.
ಇಂದು ಪರೀಕ್ಷೆಗಾಗಿ ಪಡೆದ 1597 ಸ್ಯಾಂಪಲ್ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 59,173ಕ್ಕೇರಿದೆ. ಇವುಗಳಲ್ಲಿ ಈವರೆಗೆ 49,432 ನೆಗೆಟಿವ್, 9041 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 80 ಮಂದಿ ಕೋವಿಡ್ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಇನ್ನು ಒಟ್ಟು 700 ಸ್ಯಾಂಪಲ್ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ವಿವರಿಸಿದರು.
ಜಿಲ್ಲೆಯಲ್ಲಿ ಇಂದು 375 ಮಂದಿಯನ್ನು ಆಸ್ಪತ್ರೆಗಳ ಐಸೋಲೇಷನ್ ವಾರ್ಡ್ಗೆ ದಾಖಲಿಸಲಾಗಿದೆ. ಇವರಲ್ಲಿ ಒಟ್ಟು 93 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ 282 ಮಂದಿ ಹೋಮ್ ಐಸೋಲೇಷನ್ನಲ್ಲಿ ಇದ್ದಾರೆ ಎಂದು ಅವರು ಹೇಳಿದರು.
ದಿನದಲ್ಲಿ ಬಲಿಯಾದವರು ಆರು ಮಂದಿ
ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನೊಂದಿಗೆ ಮರಣವನ್ನಪ್ಪುವವರ ಸಂಖ್ಯೆ ಪ್ರತಿ ದಿನ ಹೆಚ್ಚುತಿದ್ದು, ಬುಧವಾರ ಒಟ್ಟು ಆರು ಮಂದಿ ಹೀಗೆ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆಯೂ ಶತಕದ ಸಮೀಪದಲ್ಲಿದೆ ಎಂದು ಹೇಳಲಾಗುತ್ತಿದೆ.
ಬಲ್ಲ ಮೂಲಗಳ ಮಾಹಿತಿಯಂತೆ ಇಂದು ಸಾಸ್ತಾನ (86ವರ್ಷ), ಕುತ್ಪಾಡಿ (69), ಅಂಬಲಪಾಡಿ (60+), ಕುಕ್ಕೆಹಳ್ಳಿ (80)ಯ ಮಹಿಳೆಯರು ಉಡುಪಿ ಮತ್ತು ಮಣಿಪಾಲ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಅದೇ ರೀತಿ ಕುಂದಾಪುರ ಮತ್ತು ಪೆರ್ಡೂರಿನ ಪುರುಷರಿಬ್ಬರು ಬೇರೆ ಸಮಸ್ಯೆಗಳಿಗೆ ಚಿಕಿತ್ಸೆಯಲ್ಲಿದ್ದು, ಸೋಂಕಿಗೆ ಪಾಸಿಟಿವ್ ಆಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.