ತಬ್ಲೀಗಿ ಜಮಾಅತ್ ಪ್ರಕರಣ: ಹಲವೆಡೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ
ಹೊಸದಿಲ್ಲಿ, ಆ.19: ತಬ್ಲೀಗಿ ಜಮಾಅತ್ ಮುಖಂಡ ಮೌಲಾನಾ ಸಾದ್ ವಿರುದ್ಧ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಲವು ನಗರಗಳಲ್ಲಿ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ವರದಿಯಾಗಿದೆ.
ಮುಂಬೈ, ದಿಲ್ಲಿ, ಹೈದರಾಬಾದ್ ಹಾಗೂ ಇತರ ಹಲವು ಪ್ರದೇಶಗಳಲ್ಲಿರುವ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧಿಸಲಾಗಿದೆ. ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ್ದ ನಿಯಮಾವಳಿಗಳನ್ನು ಉಲ್ಲಂಘಿಸಿ ಕಳೆದ ಮಾರ್ಚ್‌ನಲ್ಲಿ ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ತಬ್ಲೀಗಿ ಜಮಾಅತ್ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದೆ ಎಂದು ನಿಝಾಮುದ್ದೀನ್ ಠಾಣೆಯ ಅಧಿಕಾರಿ ನೀಡಿದ ದೂರಿನಂತೆ ದಿಲ್ಲಿ ಪೊಲೀಸ್ ಕ್ರೈಂಬ್ರಾಂಚ್ ಮಾರ್ಚ್ 31ರಂದು ಮೌಲಾನಾ ಸಾದ್ ಸಹಿತ 7 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬಳಿಕ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರಿಸಲಾಗಿತ್ತು.
ತಬ್ಲೀಗಿ ಜಮಾಅತ್‌ಗೆ ದೇಶದ ಹಾಗೂ ವಿದೇಶದ ಸಂಸ್ಥೆಗಳಿಂದ ಸಂದಾಯವಾದ ದೇಣಿಗೆಯ ಬಗ್ಗೆಯೂ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಅಧಿಕಾರಿಗಳು ಹಲವು ನಗರಗಳಲ್ಲಿ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.





