ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದಿಲ್ಲ: ಸಚಿವ ಕೆ.ಎಸ್. ಈಶ್ವರಪ್ಪ

ಬೆಂಗಳೂರು, ಆ. 19: 'ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇನ್ನೂ ಕುರ್ಚಿ ವ್ಯಾಮೋಹ ಹೋಗಿಲ್ಲ. ಹೀಗಾಗಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಪದಚ್ಯುತಿಗೊಳಿಸುವ ಬಗ್ಗೆ ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ' ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಜನ್ಮದಲ್ಲಿ ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿ ಆಗಲು ಸಾಧ್ಯತೆ ಇಲ್ಲ. ಬಿಜೆಪಿಯಲ್ಲಿದ್ದ ಯಡಿಯೂರಪ್ಪನವರು ಪಕ್ಷವನ್ನು ಬಿಟ್ಟು ಕೆಜೆಪಿ ಕಟ್ಟಿದ ಕಾರಣಕ್ಕೆ ಸಿದ್ದರಾಮಯ್ಯನವರು ಆಕಸ್ಮಿಕವಾಗಿ ಮುಖ್ಯಮಂತ್ರಿಯಾದರು. ಅದನ್ನು ಅವರು ಉಳಿಸಿಕೊಳ್ಳಲಿಲ್ಲ. ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಅವರೇ ಮುಗಿಸಿದರು ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಗುಂಪುಗಾರಿಕೆ ಹೆಚ್ಚಾಗಿದ್ದು ಎಂದ ಈಶ್ವರಪ್ಪ, ಹಿಂದು-ಮುಸ್ಲಿಮರನ್ನು ನೆಮ್ಮದಿಯಾಗಿ ಬದುಕಲು ಬಿಡಿ. ನಿಮ್ಮಿಂದಲೇ ಧರ್ಮಗಳ ಮಧ್ಯೆ ಗಲಭೆಗಳು ಆಗುತ್ತಿವೆ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಹೇಳಿಕೆಯನ್ನು ನೋಡಿದರೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ನಾಚಿಕೆಯಾಗಬೇಕು. 'ನಮ್ಮ ನಾಯಕರು ಯಾರು ನನ್ನ ಬೆಂಬಲಕ್ಕೆ ಬಂದಿಲ್ಲ' ಎಂದು ಹೇಳಿದ್ದಾರೆ ಎಂದು ಈಶ್ವರಪ್ಪ ಲೇವಡಿ ಮಾಡಿದರು.
ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಸಿಬಿಐ ತನಿಖೆ ಮಾಡಿ ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ. ಆದರೆ, ಇದು ಕೋಮು ಗಲಭೆಯಲ್ಲ. ಬದಲಿಗೆ ಅದೊಂದು ಮತಾಂಧರ ದೊಂಬಿ. ಘಟನೆಯನ್ನು ಕಾಂಗ್ರೆಸ್ ಪಕ್ಷ ಈವರೆಗೂ ಖಂಡಿಸಿಲ್ಲ. ರಾಜ್ಯ ಸರಕಾರ ಬಿದ್ದು ಹೋಗಲಿ ಅಂತ ಕಾಂಗ್ರೆಸ್ ಪಕ್ಷದವರು ಈ ಕುತಂತ್ರ ಮಾಡಿದ್ದಾರೆ. ಈಗ ಅನೇಕ ಉಗ್ರಗಾಮಿಗಳು ಹೊರಗೆ ಬರುತ್ತಿದ್ದಾರೆ. ಈ ಉಗ್ರಗಾಮಿಗಳನ್ನ ಸರಕಾರ ಮಟ್ಟ ಹಾಕಲಿದೆ ಎಂದರು.
ಉಳಿದ ಮೂರು ವರ್ಷದ ಅವಧಿಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಅವರು ಇನ್ನಾದರೂ ಕನಸು ಕಾಣುವುದನ್ನು ಬಿಡಬೇಕು. ಸಿದ್ದರಾಮಯ್ಯನವರು ತಮ್ಮ ಅಸ್ತಿತ್ವಕ್ಕಾಗಿ ಟ್ವೀಟ್ ಮಾಡುವುದು, ಹೇಳಿಕೆಗಳನ್ನು ನೀಡುವುದನ್ನು ಮಾಡುತ್ತಿದ್ದಾರೆ.
-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ







