ಆಕ್ಸಿಜನ್ ಕೊರತೆ ನೀಗಿಸಲು ರಾಜ್ಯ ಸರಕಾರಕ್ಕೆ ಭಾರತೀಯ ವೈದ್ಯಕೀಯ ಸಂಘ ಮನವಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.19: ಆಕ್ಸಿಜನ್ ವ್ಯತ್ಯಯ ಆಗದಂತೆ ರಾಜ್ಯ ಸರಕಾರ ಎಚ್ಚರಿಕೆ ವಹಿಸಲಿ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮನವಿ ಮಾಡಿದೆ.
ಬುಧವಾರ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಶ್ರೀನಿವಾಸ್ ಮಾತನಾಡಿ, ಖಾಸಗಿ ಆಸ್ಪತ್ರೆಗಳಿಗೆ ತೊಂದರೆ ಆಗದಂತೆ ಸರಕಾರ ಕ್ರಮ ವಹಿಸಬೇಕಿದೆ. ಒಂದು ತಿಂಗಳಿಗೆ ಬಳಕೆಯಾಗುತ್ತಿದ್ದ ಆಕ್ಸಿಜನ್ ಈಗ ಮೂರು ದಿನಕ್ಕೆ ಬಳಕೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತಮಿಳುನಾಡಿನಿಂದ ರಾಜ್ಯಕ್ಕೆ ಆಕ್ಸಿಜನ್ ಸಿಲಿಂಡರ್ ಸರಬರಾಜು ಆಗುತ್ತಿತ್ತು. ಆದರೆ, ಅದನ್ನು ತಡೆ ಹಿಡಿಯಲಾಗಿದೆ. ಜಿಂದಾಲ್ನಲ್ಲಿ ರಾಜ್ಯದ ಶೇ.70ರಷ್ಟ್ಟು ಆಕ್ಸಿಜನ್ ಪೂರೈಕೆ ಮಾಡುವ ಸಾಮಥ್ರ್ಯ ಇದೆ. ಸರಕಾರ ಅವರ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸಲಿ ಎಂದು ಮನವಿ ಮಾಡಿದರು.
ಸರಕಾರ ಈಗಲೇ ಎಚ್ಚೆತುಕೊಳ್ಳದೇ ಇದ್ದರೆ ಆಕ್ಸಿಜನ್ ಕೊರತೆಯಿಂದ ಬ್ರೈನ್ಡೆತ್, ಐಪಾಕ್ಸಿ ಆಗಿ ಮೃತರಾಗುವ ಸಂಭವ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಗುಜರಾತ್ನಲ್ಲಿ ಅತೀ ಹೆಚ್ಚು ಆಕ್ಸಿಜನ್ ಸಿಲಿಂಡರ್ ಉತ್ಪಾದನೆ ಮಾಡಲಾಗುತ್ತದೆ. ಅಲ್ಲಿಂದ ರಾಜ್ಯಕ್ಕೆ ತರುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.





