ಚಿನ್ನದಿಂದ ರೂಪುಗೊಂಡ ಕ್ಷುದ್ರಗ್ರಹದ ಮೇಲೆ ಮಾನವರ ಕಣ್ಣು!
ಬಾಹ್ಯಾಕಾಶ ಗಣಿಗಾರಿಕೆಗೆ ‘ನಾಸಾ’ ಸಿದ್ಧತೆ

ಸಾಂದರ್ಭಿಕ ಚಿತ್ರ
ವಾಶಿಂಗ್ಟನ್, ಆ. 19: ಭೂಮಿಯಲ್ಲಿರುವ ಖನಿಜಗಳು ಬರಿದಾಗುತ್ತಿರುವಂತೆಯೇ, ಭೂಗ್ರಹದಿಂದ ಹೊರಗಿನ ಬಾಹ್ಯಾಕಾಶದಲ್ಲಿ ಇರಬಹುದಾದ ಅಮೂಲ್ಯ ಲೋಹಗಳ ಬಗ್ಗೆ ಮಾನವರ ಗಮನ ಸಹಜವಾಗಿಯೇ ಹರಿದಿದೆ. ಈ ಬಗ್ಗೆ ವಿಜ್ಞಾನಿಗಳು ಹಲವು ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿದ್ದಾರೆ.
ವಿಜ್ಞಾನಿಗಳ ಪ್ರಕಾರ, ಕ್ಷುದ್ರಗ್ರಹಗಳು (ಗ್ರಹದ ಮಾದರಿಯ ಸಣ್ಣ ಆಕಾಶಕಾಯಗಳು) ಮತ್ತು ಬಾಹ್ಯಾಕಾಶ ಪಳೆಯುಳಿಕೆಗಳ ಆಳದಲ್ಲಿ ಬಿಲಿಯಗಟ್ಟಳೆ ಡಾಲರ್ ಮೌಲ್ಯದ ಚಿನ್ನ, ಪ್ಲಾಟಿನಮ್, ವಜ್ರ ಮುಂತಾದ ಬೆಲೆಬಾಳುವ ಲೋಹಗಳು ಹುದುಗಿವೆ. ಈಗ, ಆ ಸಂಪತ್ತುಗಳ ಪೈಕಿ ಕೆಲವೊಂದನ್ನು ಪಡೆಯಲು ಮಾನವರು ಒಂದು ಹೆಜ್ಜೆ ಮುಂದಿಟ್ಟಿರುವಂತೆ ಅನಿಸುತ್ತಿದೆ.
ಬಾಹ್ಯಾಕಾಶದಲ್ಲಿರುವ ‘16 ಸೈಕ್’ ಎಂಬ ಹೆಸರಿನ ಲೋಹ-ಬಂಡೆಯಿಂದ ಕೂಡಿರುವ ಕ್ಷುದ್ರಗ್ರಹವನ್ನು ಅಧ್ಯಯನ ಮಾಡುವುದಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ ಸೈಕ್’ ಎಂಬ ಬಾಹ್ಯಾಕಾಶ ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಯು ಇತ್ತೀಚೆಗೆ ತನ್ನ ಅತ್ಯಂತ ಮಹತ್ವದ ವಿನ್ಯಾಸ ಹಂತವನ್ನು ದಾಟಿದೆ.
226 ಕಿ.ಮೀ. ಅಗಲದ ಈ ಕ್ಷುದ್ರಗ್ರಹವು ಸೌರವ್ಯೂಹದಲ್ಲಿ ಮಂಗಳ ಮತ್ತು ಗುರು ಗ್ರಹಗಳ ನಡುವೆ ಇರುವ ಕ್ಷುದ್ರಗ್ರಹ ವಲಯದಲ್ಲಿದೆ. ಇದೇ ಕ್ಷುದ್ರಗ್ರಹವು ವಿಜ್ಞಾನಿಗಳಿಗೆ ಯಾಕೆ ಮುಖ್ಯವಾಗಿ ಆಸಕ್ತಿಯ ವಿಷಯವಾಗಿದೆ? ಯಾಕೆಂದರೆ, ಇಡೀ ಜಗತ್ತಿನ ಆರ್ಥಿಕತೆಯನ್ನೇ ಬದಲಿಸುವಷ್ಟು ಸಂಪತ್ತು ಈ ಕ್ಷುದ್ರಗ್ರಹದಲ್ಲಿರುವ ಸಾಧ್ಯತೆಯಿದೆ.
ವಿಜ್ಞಾನಿಗಳ ಪ್ರಕಾರ, ಈ ಕ್ಷುದ್ರಗ್ರಹವು ಸಂಪೂರ್ಣವಾಗಿ ನಿಕ್ಕಲ್ ಮತ್ತು ಕಬ್ಬಿಣದಿಂದ ರೂಪುಗೊಂಡಿದೆ ಹಾಗೂ ಅದರ ಕೇಂದ್ರಭಾಗದಲ್ಲಿ ದಟ್ಟ ಚಿನ್ನದ ಪದರಗಳಿವೆ. ಈ ಕ್ಷುದ್ರಗ್ರಹದ ಅಂದಾಜು ಮೌಲ್ಯ ಸುಮಾರು 10,000 ಕ್ವಾಡ್ರಿಲಿಯನ್ ಡಾಲರ್. ಒಂದು ಕ್ವಾಡ್ರಿಲಿಯನ್ ಅಂದರೆ ಒಂದು ಕೋಟಿ ಕೋಟಿ. ಅಂದರೆ, ಈ ಕ್ಷುದ್ರಗ್ರಹದ ವೌಲ್ಯ ಸುಮಾರು 10,000 ಕೋಟಿ ಕೋಟಿ ಡಾಲರ್. ಇಷ್ಟು ಸಂಪತ್ತಿನಿಂದ ಈ ಭೂಮಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಕೋಟ್ಯಾಧೀಶನಾಗಿಸಬಹುದು!
ಈ ಹಿಂದಿನ ವರದಿಗಳ ಪ್ರಕಾರ, ಈ ಯೋಜನೆಯಲ್ಲಿ ಎಲಾನ್ ಮಸ್ಕ್ರ ಸ್ಪೇಸ್ಎಕ್ಸ್ ಕಂಪೆನಿಯನ್ನು ಭಾಗೀದಾರನಾಗಿಸಿದೆ. ಎಲ್ಲವೂ ಯೋಜನೆಯಂತೆ ಸಾಗಿದರೆ, 2022ರ ವೇಳೆಗೆ ‘ಸೈಕ್’ ಕ್ಷುದ್ರ ಗ್ರಹದತ್ತ ಪ್ರಯಾಣ ಆರಂಭಿಸಲು ನಾಸಾ/ಸ್ಪೇಸ್ಎಕ್ಸ್ ಸಿದ್ಧಗೊಳ್ಳಬಹುದು.







