ಬೈಂದೂರು: ಮಳೆಯಿಂದ ಎರಡು ಮನೆ ಸಂಪೂರ್ಣ ಹಾನಿ
ಉಡುಪಿ, ಆ.19: ಕಳೆದ ಎರಡು ದಿನಗಳ ಸತತ ಮಳೆಯಿಂದ ಬೈಂದೂರು ತಾಲೂಕಿನ ಹಲವು ಮನೆಗಳಿಗೆ ಭಾರೀ ಹಾನಿಯಾಗಿದ್ದು, ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ತಾಲೂಕಿನ ಯಡ್ತರೆ ಗ್ರಾಮದ ರಾಮ ದೇವಾಡಿಗ ಎಂಬವರ ಮನೆಯ ಅಂಗಳದಲ್ಲಿ ನೀರು ನಿಂತು ಮನೆಯ ಗೋಡೆ ಶಿಥಿಲಗೊಂಡು ಸಂಪೂರ್ಣ ಹಾನಿಗೊಳಗಾಗಿದ್ದು ಐದು ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಅದೇ ರೀತಿ ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ವಿಜಯ ಅವರ ಪಕ್ಕಾ ಮನೆ ಗಾಳಿ--ಮಳೆಗೆ ಸಂಪೂರ್ಣ ಹಾನಿಗೊಂಡಿದ್ದು, ಇಲ್ಲೂ ಐದು ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.ಹಳ್ಳಿಹೊಳೆ ಗ್ರಾಮದ ಕೆ.ಜೋಸೆಫ್ ಎಂಬವರ ಮನೆಯೂ ಗಾಳಿ-ಮಳೆಯಿಂದ ಭಾಗಶ: ಹಾನಿಗೊಂಡು ಒಂದು ಲಕ್ಷ ರೂ.ಗಳ ನಷ್ಟವಾಗಿದೆ.
ಉಳಿದಂತೆ ಮರವಂತೆ ಗ್ರಾಮದ ಅಣ್ಣಪ್ಪ ಪೂಜಾರಿ ಅವರ ಮನೆಗೆ 81,000 ರೂ., ಯಡ್ತರೆ ಗ್ರಾಮದ ಲಕ್ಷ್ಮಣ ದೇವಾಡಿಗರ ಮನೆಗೆ 60,000ರೂ. ಹಾಗೂ ಕುಂದಾಪುರ ತಾಲೂಕು ಕೆಂಚನೂರು ಗ್ರಾಮದ ಮುಕಾಂಬು ಎಂಬವರ ಮನೆಗೆ 50,000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಇಂದು ಬೆಳಗ್ಗೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 43 ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 35.6 ಮಿ.ಮೀ., ಕುಂದಾಪುರದಲ್ಲಿ 43.5ಮಿ.ಮೀ. ಹಾಗೂ ಕಾರ್ಕಳದಲ್ಲಿ 50ಮಿ.ಮೀ. ಮಳೆಯಾಗಿದೆ.







