ಫೇಸ್‌ಬುಕ್ ವಿವಾದ: ಬಿಜೆಪಿ ಸಂಸದನ ವಿರುದ್ಧ ಶಶಿ ತರೂರ್‌ರಿಂದ ಹಕ್ಕುಚ್ಯುತಿ ನೋಟಿಸ್

ಹೊಸದಿಲ್ಲಿ,ಆ.19: ಫೇಸ್‌ಬುಕ್ ವಿರುದ್ಧದ ಆರೋಪವನ್ನು ಚರ್ಚಿಸಲು ಮಾಹಿತಿ ತಂತ್ರಜ್ಞಾನ ಕುರಿತು ಸಂಸದೀಯ ಸ್ಥಾಯಿ ಸಮಿತಿಯ ಸಭೆಯನ್ನು ಕರೆಯುವ ತನ್ನ ನಿರ್ಧಾರದ ಕುರಿತು ಬಿಜೆಪಿ ಸಂಸದ ನಿಶಿಕಾಂತ ದುಬೆ ಅವರು ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಸಂಸದ ಹಾಗೂ ಸಂಸದೀಯ ಸಮಿತಿಯ ಅಧ್ಯಕ್ಷ ಶಶಿ ತರೂರ್ ಅವರು,ದುಬೆ ವಿರುದ್ಧ ಹಕ್ಕುಚ್ಯುತಿ ನೋಟಿಸ್‌ನ್ನು ಸಲ್ಲಿಸಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದಿರುವ ಪತ್ರದಲ್ಲಿ ತರೂರ್ ಅವರು, ‘ಸಮಿತಿಯ ಸದಸ್ಯರೊಂದಿಗೆ ಚರ್ಚಿಸದೆ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರ ಅಧ್ಯಕ್ಷರಿಗೆ ಇಲ್ಲ ’ಎಂಬ ದುಬೆಯವರ ಟ್ವಿಟರ್ ಹೇಳಿಕೆಗೆ ಬಲವಾದ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.
ತಾನು ಸಮಿತಿ ಮತ್ತು ಸ್ಪೀಕರ್ ಅನುಮತಿಯಿಲ್ಲದೆ ತನ್ನ ರಾಜಕೀಯ ಪಕ್ಷದ ಅಜೆಂಡಾವನ್ನು ಹೇರುತ್ತಿರುವುದಾಗಿ ದುಬೆ ತನ್ನ ವಿರುದ್ಧ ಆರೋಪವನ್ನು ಮಾಡಿದ್ದಾರೆ ಎಂದು ತರೂರ್ ಹೇಳಿದ್ದಾರೆ.
ಫೇಸ್‌ಬುಕ್ ವರ್ತನೆಯ ಕುರಿತು ಮಾಧ್ಯಮ ವರದಿಯೊಂದರ ಬಗ್ಗೆ ಮತ್ತು ಭಾರತದಲ್ಲಿ ದ್ವೇಷ ಭಾಷಣಗಳ ಕುರಿತು ಅದು ಯಾವ ಕ್ರಮವನ್ನು ತೆಗೆದುಕೊಳ್ಳಲಿದೆ ಎನ್ನುವುದನ್ನು ಕಂಪನಿಯಿಂದ ತಿಳಿದುಕೊಳ್ಳಲು ಸಂಸದೀಯ ಸಮಿತಿಯು ಬಯಸಿದೆ ಎಂದು ತರೂರ್ ರವಿವಾರ ಹೇಳಿದ್ದರು.
ತನ್ನ ನಿರ್ಧಾರದ ವಿರುದ್ಧ ಅವಮಾನಕಾರಿ ಹೇಳಿಕೆಯ ಮೂಲಕ ದುಬೆ ಅವರು ಸಂಸದನಾಗಿ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷನಾಗಿ ತನ್ನ ಸ್ಥಾನದ ಹಕ್ಕುಚ್ಯುತಿಯನ್ನುಂಟು ಮಾಡಿದ್ದಾರೆ ಎಂದು ತರೂರ್ ಆರೋಪಿಸಿದ್ದಾರೆ.
ಹಕ್ಕುಚ್ಯುತಿಗಾಗಿ ಮತ್ತು ಸದನದ ನಿಂದನೆಗಾಗಿ ದುಬೆ ವಿರುದ್ಧ ಕ್ರಮಕ್ಕೆ ಅಗತ್ಯ ನಿರ್ದೇಶಗಳನ್ನು ಹೊರಡಿಸುವಂತೆ ಅವರು ಸ್ಪೀಕರ್ ಬಿರ್ಲಾರನ್ನು ಆಗ್ರಹಿಸಿದ್ದಾರೆ.
ತನ್ಮಧ್ಯೆ ಸಂಸದೀಯ ಸಮಿತಿಗಳ ನಿಯಮಗಳು ಮತ್ತು ಕಾರ್ಯನಿರ್ವಹಣೆಗಳ ಕುರಿತು ಮಾಧ್ಯಮ ವರದಿಯೊಂದನ್ನು ಟ್ಯಾಗ್ ಮಾಡಿ ಬುಧವಾರ ಟ್ವೀಟಿಸಿರುವ ದುಬೆ,ಸಂಸದನಾಗಿ ಕಳೆದ 11 ವರ್ಷಗಳಲ್ಲಿ ತಾನೆಂದೂ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಮತ್ತು ತಮ್ಮ ರಾಜಕೀಯ ಪಕ್ಷಗಳ ಅಜೆಂಡಾಕ್ಕಾಗಿ ನಿಯಮಗಳನ್ನು ಉಲ್ಲಂಘಿಸಲು ಅಥವಾ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.







