ಅಮೆರಿಕ: ಟ್ರಂಪ್, ಬೈಡನ್‌ರಿಂದ ಧಾರ್ಮಿಕ ಅಲ್ಪಸಂಖ್ಯಾತ ಹಿಂದೂಗಳ ಓಲೈಕೆ

ವಾಶಿಂಗ್ಟನ್, ಆ. 19: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಹತ್ತಿರ ಬರುತ್ತಿರುವಂತೆಯೇ, ದೇಶದಲ್ಲಿ ವಾಸಿಸುತ್ತಿರುವ ಹಿಂದೂಗಳಿಗೆ ರಾಜಕೀಯ ಪ್ರಾಮುಖ್ಯತೆ ಬಂದಿದೆ. ಚುನಾವಣೆಯಲ್ಲಿ ಕಣದಲ್ಲಿರುವ ರಿಪಬ್ಲಿಕನ್ ಅಭ್ಯರ್ಥಿ ಹಾಗೂ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪ್ರತಿಪಕ್ಷ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್‌ರ ಪ್ರಚಾರ ತಂಡಗಳು ಈ ಸಣ್ಣ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವನ್ನು ಹಿಂದೆಂದೂ ಇಲ್ಲದಷ್ಟು ಮಟ್ಟದಲ್ಲಿ ಓಲೈಸುತ್ತಿವೆ.
ಅಮೆರಿಕದಲ್ಲಿ ಹಿಂದೂ ಧರ್ಮವು ನಾಲ್ಕನೇ ಅತಿ ದೊಡ್ಡ ಧರ್ಮವಾಗಿದೆ. ಅಲ್ಲಿ ಹಿಂದೂಗಳ ಸಂಖ್ಯೆ 2016ರ ಅಂಕಿಸಂಖ್ಯೆಗಳ ಆಧಾರದಲ್ಲಿ, ಅಮೆರಿಕದ ಜನಸಂಖ್ಯೆಯ ಸುಮಾರು ಒಂದು ಶೇಕಡದಷ್ಟಿತ್ತು.
ಅಧ್ಯಕ್ಷ ಟ್ರಂಪ್ ಮರು ಆಯ್ಕೆಯಾದರೆ, ಅಮೆರಿಕದಲ್ಲಿ ಹಿಂದೂಗಳ ಱಧಾರ್ಮಿಕ ಸ್ವಾತಂತ್ರ್ಯಕ್ಕಿರುವ ಎಲ್ಲ ಅಡೆತಡೆಗಳನ್ನುೞಅವರು ನಿವಾರಿಸುತ್ತಾರೆ ಎಂದು ಟ್ರಂಪ್ ಪ್ರಚಾರ ತಂಡ ಹೇಳಿದರೆ, ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬೈಡನ್, ಹಿಂದೂ ಧಾರ್ಮಿಕ ಸಮುದಾಯದ ಅಹವಾಲುಗಳನ್ನು ಆಲಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ಬೈಡನ್ ಪ್ರಚಾರ ತಂಡ ಮಂಗಳವಾರ ಹೇಳಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಮೊದಲ ಬಾರಿಗೆ, ಟ್ರಂಪ್ ಪ್ರಚಾರ ತಂಡವು ಆಗಸ್ಟ್ 14ರಂದು ಱಹಿಂದೂ ವಾಯ್ಸಸ್ ಫಾರ್ ಟ್ರಂಪ್‌ೞಎಂಬು ಗುಂಪೊಂದನ್ನು ರಚಿಸಿದೆ.
ಎರಡು ದಿನಗಳ ಬಳಿಕ, ಪ್ರಮುಖ ಹಿಂದೂ ನಾಯಕಿ ನೀಲಿಮಾ ಗೋಣುಗುಂಟ್ಲ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದ ಉದ್ಘಾಟನೆಯ ವೇಳೆ ನಡೆದ ಅಂತರ್‌ಧರ್ಮೀಯ ಪ್ರಾರ್ಥನಾ ಸಮಾವೇಶದಲ್ಲಿ ಭಾಗವಹಿಸಿದರು.







