ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಕರೆ ಪ್ರಕರಣ : ಆರೋಪಿ ಸೆರೆ

ಮಂಗಳೂರು : ಬಜ್ಪೆ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ಹೆಸರು ಬಹಿರಂಗ ಪಡಿಸಿಲ್ಲ. ಬಂಧನ ಮಾಹಿತಿಯನ್ನು ಶೀಘ್ರದಲ್ಲಿ ತಿಳಿಸುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಅನಾಮಧೇಯ ವ್ಯಕ್ತಿ ಬುಧವಾರ ಮಧ್ಯಾಹ್ನ ಬೆದರಿಕೆ ಕರೆ ಮಾಡಿದ್ದು, ಸಂಪೂರ್ಣ ತಪಾಸಣೆಯ ಬಳಿಕ ಇದೊಂದು ಹುಸಿಬಾಂಬ್ ಕರೆ ಎನ್ನುವುದು ವರದಿಯಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್. ವಾಸುದೇವ ರಾವ್ ಅವರಿಗೆ ಈ ಕರೆ ಬಂದಿದ್ದು, ಅವರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಕಾರ್ಯಾಚರಣೆಗಿಳಿದ ಸಿಐಎಸ್‌ಎಫ್ ಸಿಬ್ಬಂದಿ ಹಾಗೂ ಪೊಲೀಸರು ಇಡೀ ನಿಲ್ದಾಣ ಪೂರ್ತಿ ತಪಾಸಣೆ ನಡೆಸಿದ್ದಾರೆ. ಎಲ್ಲೂ ಬಾಂಬ್ ಪತ್ತೆಯಾಗಿಲ್ಲ. ಹಾಗಾಗಿ ಇದೊಂದು ಹುಸಿ ಕರೆ ಎನ್ನುವ ನಿರ್ಧಾರಕ್ಕೆ ಏರ್‌ಪೋರ್ಟ್ ಅಧಿಕಾರಿಗಳು ಬಂದಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದೇ ವರ್ಷ ಜನವರಿ 20ರಂದು ಶಂಕಿತ ಉಗ್ರ ಆದಿತ್ಯ ರಾವ್ ಎಂಬಾತ ಮಂಗಳೂರು ವಿಮಾನ ನಿಲ್ದಾಣದ ಹೊರಗಡೆ ಸ್ಫೋಟಕ ಇಟ್ಟದ್ದು ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಸರ್ವ ಭದ್ರತಾ ಕ್ರಮಗಳ ಬಳಿಕ ಆ ಸ್ಫೋಟಕವನ್ನು ನಿಲ್ದಾಣ ಸಮೀಪದ ಕೆಂಜಾರ್ ಮೈದಾನದಲ್ಲಿ ನಿಷ್ಕ್ರಿಯಗೊಳಿಸಲಾಗಿತ್ತು.
ಆರೋಪಿ ವಶಕ್ಕೆ
ಹುಸಿಬಾಂಬ್ ಕರೆ ಮಾಡಿದ ಬಗ್ಗೆ ಈಗಾಗಲೇ ಓರ್ವನನ್ನು ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಆದರೆ ವ್ಯಕ್ತಿಯ ವಶಕ್ಕೆ ಪಡೆದ ವಿಚಾರವನ್ನು ಪೊಲೀಸರು ಬಹಿರಂಗಪಡಿಸಿಲ್ಲ.
‘ವಾರ್ತಾಭಾರತಿ’ ಜೊತೆಗೆ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ವಿಮಾನ ನಿಲ್ದಾಣಕ್ಕೆ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಹಾಕುವ ಬಗ್ಗೆ ಬೆದರಿಕೆ ಬಂದಿತ್ತು. ಅದೊಂದು ಹುಸಿಬಾಂಬ್ ಕರೆ. ನಂಬರ್‌ನ್ನು ಪತ್ತೆ ಮಾಡಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಬಳಿಕವೇ ಎಲ್ಲ ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.







