'ಭೂಷಣ್ ವಿರುದ್ಧದ ಪ್ರಕರಣದ ವಿಚಾರಣೆ ಸಾಂವಿಧಾನಿಕ ಪೀಠದಲ್ಲಿ ನಡೆಯಬೇಕಿತ್ತು'
ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶ ಕುರಿಯನ್ ಜೋಸೆಫ್

ಹೊಸದಿಲ್ಲಿ, ಆ.19: ನ್ಯಾಯವಾದಿ ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಸಾಂವಿಧಾನಿಕ ಪೀಠದಲ್ಲಿ ನಡೆಯಬೇಕಿತ್ತು. ಅಲ್ಲದೆ ಸರ್ವೋಚ್ಛ ನ್ಯಾಯಾಲಯ ಸ್ವಯಂ ಪ್ರಕರಣ ದಾಖಲಿಸಿ ನಡೆಸಿದ ವಿಚಾರಣೆಯ ತೀರ್ಪನ್ನು ಅಂತರ್ ನ್ಯಾಯಾಲಯದ ಮೇಲ್ಮನವಿ ಮೂಲಕ ಪ್ರಶ್ನಿಸಲು ಅವಕಾಶವಿರಬೇಕು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಕುರಿಯನ್ ಜೋಸೆಫ್ ಹೇಳಿದ್ದಾರೆ.
ಕಾನೂನಿಗೆ ಸಂಬಂಧಿಸಿದ ಗಣನೀಯ ಪ್ರಶ್ನೆಗಳನ್ನು ಒಳಗೊಂಡ ಯಾವುದೇ ಪ್ರಕರಣಗಳನ್ನು ನಿರ್ಧರಿಸಲು ಕನಿಷ್ಟ 5 ನ್ಯಾಯಾಧೀಶರ ಉಪಸ್ಥಿತಿ ಅಗತ್ಯ ಎಂದು ಸಂವಿಧಾನದ 145(3)ನೇ ಪರಿಚ್ಛೇದದಡಿ ತಿಳಿಸಲಾಗಿದೆ. ಆದರೆ ಭೂಷಣ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠ ವಿಚಾರಣೆ ನಡೆಸಿ ತೀರ್ಪು ನೀಡಿದೆ. 1971ರ ನ್ಯಾಯಾಂಗ ನಿಂದನೆ ಕಾಯ್ದೆಯ 19ನೇ ಸೆಕ್ಷನ್‌ನಡಿ, ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡುವ ತೀರ್ಪು ಹಾಗೂ ವಿಭಾಗೀಯ ಪೀಠ ನೀಡುವ ತೀರ್ಪನ್ನು ಮಾತ್ರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ. ಬಹುಷಃ ನ್ಯಾಯವಿಫಲತೆಯ ಕನಿಷ್ಟ ಸಾಧ್ಯತೆಯನ್ನೂ ನಿವಾರಿಸುವ ಉದ್ದೇಶ ಇದರ ಹಿಂದಿರಬಹುದು. ಇದೇ ರೀತಿಯ ಅವಕಾಶವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿ ನಡೆಸುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲೂ ಒದಗಿಸಬೇಕು ಎಂದು ನ್ಯಾ ಜೋಸೆಫ್ ಹೇಳಿದ್ದಾರೆ.
ಆಕಾಶವೇ ಬಿದ್ದರೂ ಸರಿಯೇ, ನ್ಯಾಯ ದೊರಕಬೇಕು ಎಂಬುದು ನ್ಯಾಯಾಲಯಗಳ ಆಡಳಿತದ ಮೂಲಾಧಾರವಾಗಿದೆ. ಆದರೆ ನ್ಯಾಯ ದೊರಕದಿದ್ದರೆ ಅಥವಾ ನ್ಯಾಯ ವಿಫಲತೆ ಸಂಭವಿಸಿದರೆ ಆಗ ಖಂಡಿತವಾಗಿಯೂ ಆಕಾಶ ಬೀಳುತ್ತದೆ. ಹೀಗಾಗದಂತೆ ಸುಪ್ರೀಂಕೋರ್ಟ್ ಕ್ರಮ ಕೈಗೊಳ್ಳಬೇಕು ಎಂದ ಅವರು, ಈ ಹಿಂದೆ ನ್ಯಾ. ಸಿಎಸ್ ಕರ್ಣನ್ (ಆಗ ಹೈಕೋರ್ಟ್ ನ್ಯಾಯಾಧೀಶರಾಗಿದ್ದರು) ಪ್ರಕರಣವನ್ನು ಸುಪ್ರೀಂಕೋರ್ಟ್‌ನ 7 ನ್ಯಾಯಾಧೀಶರ ಪೀಠ ನಿರ್ವಹಿಸಿರುವುದನ್ನು ಉಲ್ಲೇಖಿಸಿದರು.
ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಸುಪ್ರೀಂಕೋರ್ಟ್ ಚಿರಕಾಲ ಉಳಿಯುತ್ತದೆ. ಇಂತಹ ಪ್ರಮುಖ ಪ್ರಕರಣಗಳನ್ನು ಸುಪ್ರೀಂಕೋರ್ಟ್ ವೀಡಿಯೊ ಕಾನ್ಫರೆನ್ಸಿಂಗ್‌ನ ಬದಲು ದೈಹಿಕ ಉಪಸ್ಥಿತಿಯ ಮೂಲಕ ನಡೆಸಬೇಕು ಎಂದು ನ್ಯಾ. ಜೋಸೆಫ್ ಅಭಿಪ್ರಾಯ ಪಟ್ಟಿದ್ದಾರೆ.







