'ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸಿದ ಮಾಜಿ ಶಾಸಕ ಜೀವರಾಜ್ ವಿರುದ್ದ ಪ್ರಕರಣ ದಾಖಲಿಸಲು ಯಾಕೆ ಹಿಂದೇಟು'
ಎಸ್‍ಡಿಪಿಐ ಪ್ರಶ್ನೆ
ಬೆಂಗಳೂರು, ಆ.19: ಶೃಂಗೇರಿಯಲ್ಲಿ ಹಿಂದೂ-ಮುಸ್ಲಿಮ್ ಸೌಹಾರ್ದತೆಗೆ ಧಕ್ಕೆ ತರುವುದಕ್ಕೆ ಸಂಚು ರೂಪಿಸಿದ ಆರೋಪಿ ಮನೋಹರ್(ಮಿಲಿಂದ್), ಮಾಜಿ ಶಾಸಕ ಜೀವರಾಜ್ ಹಾಗೂ ಆತನ ಸಹಚರರ ವಿರುದ್ದ ದೂರು ನೀಡಲಾಗಿದ್ದರೂ ಯಾಕೆ ಪ್ರಕರಣ ದಾಖಲಿಸಲಿಲ್ಲವೆಂದು ಎಸ್‍ಡಿಪಿಐ ಪ್ರಶ್ನಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆ, ಶೃಂಗೇರಿಯಲ್ಲಿ ಶಂಕರಾಚಾರ್ಯ ಗೋಪುರದ ಮೇಲೆ ಬಾವುಟವೊಂದನ್ನು ಹಾಕಿ ಅದನ್ನು ಎಸ್‍ಡಿಪಿಐ ಸಂಘಟನೆಯ ಮೇಲೆ ಆರೋಪಿಸುವ ಮೂಲಕ ಕೋಮು ಹಿಂಸಾಚಾರ ಸೃಷ್ಟಿಸಲು ಪ್ರಯತ್ನಿಸಿರುವುದು ಗಂಭೀರವಾದ ಪ್ರಯತ್ನವಾಗಿದೆ. ಆದರೂ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸದೆ, ಜನತೆಗೆ ಯಾವ ಸಂದೇಶ ನೀಡಲು ಬಯಸುತ್ತಿದ್ದಾರೆ. ಅರೋಪಿ ಮನೋಹರ(ಮಿಲಿಂದ್) ಶಂಕರಾಚಾರ್ಯ ಗೋಪುರದ ಮೇಲೆ ಬಾವುಟ ಹಾಕಿರುವುದು ಸಿಸಿ ಟಿವಿಯಿಂದ ಪತ್ತೆಯಾಗಿದೆ. ಇದಕ್ಕೂ ಮುನ್ನ, ಗೋಪುರದ ಮೇಲೆ ಬಾವುಟ ಇರುವುದನ್ನೇ ಮುಂದಿಟ್ಟುಕೊಂಡು ಮಾಜಿ ಶಾಸಕ ಜೀವರಾಜ್, ಎಸ್‍ಡಿಪಿಐ ಕಾರ್ಯಕರ್ತರನ್ನು ಬಂಧಿಸದಿದ್ದರೆ ಮುಂದಿನ ಪರಿಣಾಮಗಳಿಗೆ ನೀವೇ ಜವಾಬ್ದಾರರೆಂದು ಪೊಲೀಸರನ್ನು ಬೀದಿಯಲ್ಲಿ ನಿಲ್ಲಿಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಕರಣದಲ್ಲಿ ಮುಸ್ಲಿಮ್ ಸಮುದಾಯದ ಯಾವುದೇ ಪಾತ್ರವಿಲ್ಲದಿದ್ದರೂ ಪೊಲೀಸರು ಮೂವರು ಮುಸ್ಲಿಮ್ ಯುವಕರ ಮೇಲೆ ಎಫ್‍ಐಆರ್ ದಾಖಲಿಸಿ, ರಾತ್ರಿಯಿಡೀ ಠಾಣೆಯಲ್ಲಿ ಕೂಡಿ ಹಾಕಿದ್ದಾರೆ. ಆದರೆ, ಪ್ರಕರಣದಲ್ಲಿ ನೇರಭಾಗಿದ್ದ ಮನೋಹರ್ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಬೇಕಾದ ಪ್ರಕರಣವಾಗಿದ್ದರೂ ದೂರು ದಾಖಲಾಗಲಿಲ್ಲ. ಈ ಬಗ್ಗೆ ದೂರು ನೀಡಿದ್ದರೂ ಆರೋಪಿಯ ವಿರುದ್ದ ದೂರು ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.
ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಮನೋಹರ(ಮಿಲಿಂದ್), ಮಾಜಿ ಶಾಸಕ ಜೀವರಾಜ್ ಹಾಗೂ ಸಹಚರರ ವಿರುದ್ದ ದೂರು ದಾಖಲಾಗದಿದ್ದರೆ ಕಾನೂನು ಸುವ್ಯವಸ್ಥೆಯ ಬಗ್ಗೆ ಜನರಲ್ಲಿ ಅಭದ್ರತೆ ಹಾಗೂ ಪ್ರಶ್ನೆ ಹುಟ್ಟು ಹಾಕುತ್ತದೆ. ಹೀಗಾಗಿ ಕೂಡಲೇ ಆರೋಪಿಗಳ ವಿರುದ್ದ ಎಫ್‍ಐಆರ್ ದಾಖಲಿಸಬೇಕು. ಹಾಗೂ ಬಂಧಿಸುವ ಮೂಲಕ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ಎಸ್‍ಡಿಪಿಐ ಪ್ರಕಟನೆಯ ಮೂಲಕ ಒತ್ತಾಯಿಸಿದೆ.





