ದುಬೆ ಎನ್‌ಕೌಂಟರ್: ವಿಚಾರಣಾ ಆಯೋಗದ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಹೊಸದಿಲ್ಲಿ,ಆ.19: ಗ್ಯಾಂಗ್‌ಸ್ಟರ್ ವಿಕಾಸ್ ದುಬೆಯ ಎನ್‌ಕೌಂಟರ್ ಕುರಿತು ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಬಿ.ಎಸ್.ಚೌಹಾಣ್ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ನ್ಯಾಯಾಂಗ ಆಯೋಗದ ರಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ವಜಾಗೊಳಿಸಿದೆ.
ನ್ಯಾಯಾಂಗ ಆಯೋಗದಿಂದ ನ್ಯಾಯಸಮ್ಮತ ವಿಚಾರಣೆಯನ್ನು ಖಚಿತಪಡಿಸಲು ಸಾಕಷ್ಟು ಸುರಕ್ಷಾ ಕ್ರಮಗಳಿವೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು ಹೇಳಿತು.
ಆಯೋಗವನ್ನು ಪುನರ್‌ರಚಿಸಬೇಕು ಮತ್ತು ನ್ಯಾ.(ನಿ) ಚೌಹಾಣ್,ನ್ಯಾ.(ನಿ) ಶಶಿಕಾಂತ ಅಗರವಾಲ್ ಮತ್ತು ಉತ್ತರ ಪ್ರದೇಶದ ನಿವೃತ್ತ ಡಿಜಿಪಿ ಕೆ.ಎಲ್ ಗುಪ್ತಾ ಅವರ ಬದಲಿಗೆ ಸರ್ವೋಚ್ಚ ನ್ಯಾಯಾಲಯದ ಇತರ ಮಾಜಿ ನ್ಯಾಯಾಧೀಶರು ಮತ್ತು ನಿವೃತ್ತ ಡಿಜಿಪಿಗಳನ್ನು ನೇಮಕಗೊಳಿಸಬೇಕು ಎಂದು ಅರ್ಜಿದಾರರಾದ ವಕೀಲ ಘನಶ್ಯಾಮ ಉಪಾಧ್ಯಾಯ ಅವರು ಕೋರಿದ್ದರು.
ನ್ಯಾ.ಚೌಹಾಣ್ ಅವರ ಸೋದರ ಉತ್ತರ ಪ್ರದೇಶದ ಶಾಸಕರಾಗಿದ್ದಾರೆ ಮತ್ತು ಅವರ ಪುತ್ರಿ ಸಂಸದರನ್ನು ಮದುವೆಯಾಗಿದ್ದಾರೆ ಎಂದು ಉಪಾಧ್ಯಾಯ ಆರೋಪಿಸಿದ್ದರು.
ಮಾಧ್ಯಮ ವರದಿಗಳ ಆಧಾರದಲ್ಲಿ ನ್ಯಾ.ಚೌಹಾಣ್ ಅವರ ಹೆಸರು ಕೆಡಿಸಲು ತಾನು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಆ.11ರಂದು ಹೇಳಿದ್ದ ಪೀಠವು ಅರ್ಜಿದಾರರನ್ನು ತರಾಟೆಗೆತ್ತಿಕೊಂಡು,ನ್ಯಾಯಾಧೀಶರೋರ್ವರ ಸಂಬಂಧಿ ರಾಜಕೀಯ ಪಕ್ಷಕ್ಕೆ ಸೇರಿರುವುದು ಕಾನೂನುಬಾಹಿರ ಕೃತ್ಯವೇ ಎಂದು ಪ್ರಶ್ನಿಸಿತ್ತು.







