ಜಾಗತಿಕ ಲಸಿಕೆ ಕಾರ್ಯಕ್ರಮಕ್ಕೆ ಸೇರ್ಪಡೆಯಾಗುವಂತೆ ದೇಶಗಳಿಗೆ ಡಬ್ಲ್ಯುಎಚ್‌ಒ ಮನವಿ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಆ. 19: ತನ್ನ ಜಾಗತಿಕ ಲಸಿಕೆ ಕಾರ್ಯಕ್ರಮದಲ್ಲಿ ಸೇರಿಕೊಳ್ಳುವಂತೆ ಆಹ್ವಾನಿಸಿ ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿಯೊಂದು ದೇಶಕ್ಕೆ ಮಂಗಳವಾರ ಪತ್ರವೊಂದನ್ನು ಬರೆದಿದೆ ಹಾಗೂ ತನ್ನ ಸಂಭಾವ್ಯ ಲಸಿಕೆ ಯಾರಿಗೆ ಮೊದಲು ಸಿಗುತ್ತದೆ ಎಂಬುದನ್ನೂ ಅದು ತಿಳಿಸಿದೆ.
ಅತಿ ಹೆಚ್ಚಿನ ಅಪಾಯಕ್ಕೆ ಗುರಿಯಾಗಿರುವ ಜಗತ್ತಿನ ಜನ ಸಮುದಾಯಕ್ಕೆ ಏಕಕಾಲದಲ್ಲಿ ಲಸಿಕೆಯನ್ನು ನೀಡದ ಹೊರತು, ಜಾಗತಿಕ ಆರ್ಥಿಕತೆಯನ್ನು ಪುನರ್ನಿರ್ಮಿಸುವುದು ಅಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದ್ದಾರೆ.
ಲಸಿಕೆ ಸಿದ್ಧವಾದ ಮೇಲೆ ಮೊದಲ ಸುತ್ತಿನ ಲಸಿಕೆಯನ್ನು ಪ್ರತಿ ದೇಶದ ಜನಸಂಖ್ಯೆಯ 20 ಶೇಕಡದಷ್ಟು ಮಂದಿಗೆ ನೀಡಲಾಗುವುದು. ಇದರಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುವ ಆರೋಗ್ಯ ಕಾರ್ಯಕರ್ತರು, 65 ವರ್ಷಕ್ಕಿಂತ ಹೆಚ್ಚಿನವರು ಮತ್ತು ಈಗಾಗಲೇ ಇತರ ಗಂಭೀರ ರೋಗಗಳಿಂದ ಬಳಲುತ್ತಿರುವವರು ಸೇರಿದ್ದಾರೆ ಎಂದು ಅವರು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ‘ಕೋವ್ಯಾಕ್ಸ್’ ಎಂಬ ಕಂಪೆನಿಯು ಕೋವಿಡ್-19 ಲಸಿಕೆಯ ಸಂಶೋಧನೆಯಲ್ಲಿ ತೊಡಗಿದೆ.





