ಅಟ್ಲಾಂಟಿಕ್ ಸಾಗರದಲ್ಲಿ ಊಹೆಗಿಂತಲೂ ಹೆಚ್ಚಿನ ಪ್ಲಾಸ್ಟಿಕ್
ಸಾಗರಗಳ ಉಸಿರುಗಟ್ಟಿಸುತ್ತಿರುವ ಆಧುನಿಕತೆಯ ಶಾಪ
ಪ್ಯಾರಿಸ್ (ಫ್ರಾನ್ಸ್), ಆ. 19: ಅಟ್ಲಾಂಟಿಕ್ ಸಾಗರಕ್ಕೆ 1950ರಿಂದಲೂ ಎಸೆಯುತ್ತಾ ಬರಲಾಗಿರುವ ಪ್ಲಾಸ್ಟಿಕ್ ತ್ಯಾಜ್ಯದ ಒಟ್ಟು ತೂಕಕ್ಕೆ ಹೋಲಿಸಿದರೆ, ಇಂದು ಅದಕ್ಕಿಂತಲೂ ಹೆಚ್ಚು ಪ್ರಮಾಣದ ಪ್ಲಾಸ್ಟಿಕ್ ಸಾಗರದಲ್ಲಿ ತೇಲುತ್ತಿರಬಹುದು ಎಂದು ಹೊಸ ಸಂಶೋಧನೆಯೊಂದು ಮಂಗಳವಾರ ತಿಳಿಸಿದೆ.
ಮೂರು ಅತ್ಯಂತ ಸಾಮಾನ್ಯ ಪ್ಲಾಸ್ಟಿಕ್ ವಸ್ತುಗಳ ಮಾದರಿಗಳು ಮತ್ತು ಕಂಪ್ಯೂಟರ್ ಮಾದರಿಗಳ ವಿಶ್ಲೇಷಣೆಯ ಆಧಾರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ವಿಶ್ಲೇಷಣೆಯು, ಜಗತ್ತಿನ ಎರಡನೇ ಅತಿ ದೊಡ್ಡ ಸಾಗರದ ಉಸಿರುಗಟ್ಟಿಸುತ್ತಿರುವ ಮಾಲಿನ್ಯದ ಅನೂಹ್ಯ ಪ್ರಮಾಣವನ್ನು ಬಿಚ್ಚಿಟ್ಟಿದೆ.
ಭೂಮಿಯ ಸಾಗರಗಳಲ್ಲಿ ಸುಮಾರು 150 ಮಿಲಿಯ ಟನ್ ಪ್ಲಾಸ್ಟಿಕ್ ಇದೆ ಎಂದು ಅಂದಾಜಿಸಲಾಗಿದೆ. ಅವುಗಳ ಪೈಕಿ ಹೆಚ್ಚಿನ ಪ್ಲಾಸ್ಟಿಕ್ ಮೈಕ್ರೋಪ್ಲಾಸ್ಟಿಕ್ ಕಣಗಳ ರೂಪದಲ್ಲಿ ಇದೆ.
ಈ ಅತಿ ಸಣ್ಣ ಪ್ಲಾಸ್ಟಿಕ್ ಕಣಗಳನ್ನು ಭೂಮಿಯಲ್ಲಿರುವ ಪ್ರತಿಯೊಂದು ಸಾಗರದಲ್ಲಿ ಹಾಗೂ ಜಗತ್ತಿನ ಅತ್ಯಂತ ಆಳದ ಕಣಿವೆಗಳಲ್ಲೂ ಪತ್ತೆಹಚ್ಚಲಾಗಿದೆ. ಸಾಗರಗಳಲ್ಲಿ ಪ್ಲಾಸ್ಟಿಕ್ ಎಲ್ಲಾ ಕಡೆ ಹರಡಿದ್ದರೂ, ಅದನ್ನು ನಿಖರವಾಗಿ ಅಳೆಯುವುದು ಕಷ್ಟದ ಕೆಲಸವಾಗಿದೆ.
ಈ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಬ್ರಿಟನ್‌ನ ನ್ಯಾಶನಲ್ ಓಶನೋಗ್ರಫಿ ಸೆಂಟರ್‌ನ ಸಂಶೋಧಕರು ಅಟ್ಲಾಂಟಿಕ್ ಸಾಗರದ 10,000 ಕಿ.ಮೀ. ವ್ಯಾಪ್ತಿಯಲ್ಲಿನ 12 ಸ್ಥಳಗಳಿಂದ ಸಂಗ್ರಹಿಸಿದ ಮಾದರಿಗಳಿಂದ ಪಡೆದ ಪ್ಲಾಸ್ಟಕ್ಕನ್ನು ವಿಶ್ಲೇಷಣೆಗೊಳಪಡಿಸಿದರು.
ಆಗ, ಪಾಲಿಎತಿಲೀನ್, ಪಾಲಿಪ್ರೊಪಿಲೀನ್ ಮತ್ತು ಪಾಲಿಸ್ಟೈರೀನ್ ಎಂಬ ಮೂರು ಸಾಮಾನ್ಯ ವಿಧಗಳ ಸಾಗರ ಪ್ಲಾಸ್ಟಿಕ್‌ಗಳು ಮೇಲ್ಮೈಯಿಂದ ಕೆಳಗಿನ 10 ಮತ್ತು 100 ಮೀಟರ್‌ಗಳ ನಡುವಿನ ಆಳಗಳಲ್ಲಿ ಅಗಾಧ ಪ್ರಮಾಣದಲ್ಲಿ ಇರುವುದನ್ನು ಪತ್ತೆಹಚ್ಚಿದರು.
ಅಟ್ಲಾಂಟಿಕ್ ಸಾಗರದಲ್ಲಿ ಇಂದು 1.7ರಿಂದ 4.7 ಕೋಟಿ ಟನ್ ಪ್ಲಾಸ್ಟಿಕ್ ಇರಬಹುದು ಎಂಬುದಾಗಿ ಅವರು ಅಂದಾಜಿಸಿದ್ದಾರೆ.







