ಪಿಎಂ ಎಸ್‌ವಿಎ ನಿಧಿ: ಬೀದಿ ವ್ಯಾಪಾರಿಗಳ ಸಾಲದ ಅರ್ಜಿಗಳ ಸಂಸ್ಕರಣೆಗೆ ಮೊಬೈಲ್ ಆ್ಯಪ್‌ಗೆ ಚಾಲನೆ

ಹೊಸದಿಲ್ಲಿ,ಆ.19: ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಎಸ್‌ವಿಎ ನಿಧಿ) ಯೋಜನೆಯಡಿ ಬೀದಿ ವ್ಯಾಪಾರಿಗಳಿಂದ ಸಾಲಕ್ಕಾಗಿ ಅರ್ಜಿಗಳನ್ನು ಪಡೆದುಕೊಳ್ಳಲು ಮತ್ತು ಸಂಸ್ಕರಿಸಲು ನಗರ ಸ್ಥಳೀಯ ಸಂಸ್ಥೆಗಳಿಗಾಗಿ ಮೊಬೈಲ್ ಆ್ಯಪ್‌ವೊಂದನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಬಿಡುಗಡೆಗೊಳಿಸಿದ್ದಾರೆ.
ಮಂಗಳವಾರ ಸಂಜೆ ರಾಜ್ಯಗಳ ನಗರಾಭಿವೃದ್ಧಿ ಸಚಿವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಿಎಂ ಎಸ್‌ವಿಎ ನಿಧಿ ಫಲಾನುಭವಿಗಳಿಗೆ ಪಿಎಂ ಆವಾಸ್ ಯೋಜನೆ (ನಗರ),ಜನಧನ ಯೋಜನೆ, ಆಯುಷ್ಮಾನ್ ಭಾರತ ಹಾಗೂ ದೀನದಯಾಳ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯಗಳ ಅಭಿಯಾನದಂತಹ ಇತರ ಯೋಜನೆಗಳ ಲಾಭಗಳನ್ನು ಒದಗಿಸುವ ಉದ್ದೇಶದಿಂದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಇಂತಹ ಫಲಾನುಭವಿಗಳ ಸಂಪೂರ್ಣ ಸಾಮಾಜಿಕ-ಆರ್ಥಿಕ ವಿವರಗಳನ್ನು ದಾಖಲಿಸಿಕೊಳ್ಳುವ ಕಾರ್ಯವನ್ನು ಕೈಗೊಳ್ಳಬೇಕು ಎಂದೂ ನಿರ್ಧರಿಸಲಾಗಿದೆ.
ಸಚಿವ ಪುರಿ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮರುಮಾಹಿತಿಗಳನ್ನು ಪಡೆದುಕೊಂಡಿದ್ದು,ಪಿಎಂ ಎಸ್‌ವಿಎ ನಿಧಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಮುಖ್ಯ ಪಾಲುದಾರರೊಡನೆ ಸಭೆಗಳನ್ನು ನಡೆಸುವಂತೆ ಅವುಗಳಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ ಎಂದು ಸಚಿವಾಲಯವು ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪಿಎಂ ಎಸ್‌ವಿಎ ನಿಧಿಯಡಿ ಬೀದಿ ವ್ಯಾಪಾರಿಗಳು ದುಡಿಯುವ ಬಂಡವಾಳವಾಗಿ 10,000 ರೂ.ಗಳ ಸಾಲವನ್ನು ಪಡೆದುಕೊಳ್ಳಬಹುದು ಮತ್ತು ಇದನ್ನು ಒಂದು ವರ್ಷದಲ್ಲಿ ಮಾಸಿಕ ಕಂತುಗಳ ಮೂಲಕ ತೀರಿಸಬೇಕಾಗುತ್ತದೆ.
ಪೊಲೀಸರು/ಮುನಸಿಪಲ್ ಅಧಿಕಾರಿಗಳಿಂದ ಬೀದಿ ವ್ಯಾಪಾರಿಗಳಿಗೆ ಅನಗತ್ಯ ಕಿರುಕುಳ ಕುರಿತಂತೆ ಪುರಿ ಅವರು, ಹೊಣೆಗಾರಿಕೆಯನ್ನು ನಿಗದಿಗೊಳಿಸುವ ಮೂಲಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ತಿಳಿಸಿದರು.
ಜು.2ರಂದು ಪಿಎಂ ಎಸ್‌ವಿಎ ನಿಧಿ ಪೋರ್ಟಲ್‌ನಲ್ಲಿ ಅರ್ಜಿಗಳ ಆನ್‌ಲೈನ್ ಸಲ್ಲಿಕೆ ಆರಂಭಗೊಂಡಾಗಿನಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 5.68 ಲಕ್ಷಕ್ಕೂ ಅಧಿಕ ಸಾಲದ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಹಾಗೂ 1.3 ಲ.ಕ್ಕೂ ಅಧಿಕ ಅರ್ಜಿಗಳಿಗೆ ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.







