ಫೇಸ್ ಬುಕ್ ಇಂಡಿಯಾ ನಿರ್ವಹಣೆ ವಿರುದ್ಧ ವಿಶ್ವಾದ್ಯಂತ ಉದ್ಯೋಗಿಗಳ ಆಕ್ರೋಶ: ವರದಿ
ಬಿಜೆಪಿ ಪರ ಮೃದು ಧೋರಣೆ ವಿವಾದ

ಹೊಸದಿಲ್ಲಿ: ಫೇಸ್ ಬುಕ್ ಪ್ಲಾಟ್ ಫಾರಂನಲ್ಲಿ ಹೇಗೆ ರಾಜಕೀಯ ವಿಷಯಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಫೇಸ್ ಬುಕ್ ಇಂಡಿಯಾದ ಮುಖ್ಯಸ್ಥೆ ಅಂಖಿ ದಾಸ್ ಅವರನ್ನು ಉದ್ಯೋಗಿಗಳು ಪ್ರಶ್ನಿಸುತ್ತಿದ್ದಾರೆ ಎಂದು ಆಂತರಿಕ ಮೂಲಗಳು ತಿಳಿಸಿರುವುದಾಗಿ ‘ರಾಯ್ಟರ್ಸ್’ ವರದಿ ಮಾಡಿದೆ.
ಬಿಜೆಪಿ ಶಾಸಕರೊಬ್ಬರ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳದೆ ಇರಲು ಅಂಖಿ ದಾಸ್ ಸೂಚಿಸಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ ಬಳಿಕ ಭಾರತದಲ್ಲಿ ಫೇಸ್ ಬುಕ್ ಸಾರ್ವಜನಿಕ ಸಂಪರ್ಕ ಮತ್ತು ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಫೇಸ್ ಬುಕ್ ಭಾರತೀಯ ತಂಡ ಸರಿಯಾದ ಪ್ರಕ್ರಿಯೆಗಳು ಮತ್ತು ಕಂಟೆಂಟ್ ನಿಯಂತ್ರಕ ನಿಯಮಗಳನ್ನು ಪಾಲಿಸುತ್ತಿದೆಯೇ ಎಂದು ಅಮೆರಿಕ ಸೇರಿದಂತೆ ವಿಶ್ವಾದ್ಯಂತದ ಫೇಸ್ ಬುಕ್ ಉದ್ಯೋಗಿಗಳು ಪ್ರಶ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ‘ರಾಯ್ಟರ್ಸ್’ ವರದಿ ಮಾಡಿದೆ.
‘ಮುಸ್ಲಿಂ ವಿರೋಧಿ ನೀತಿಯನ್ನು ಖಂಡಿಸಬೇಕು ಮತ್ತು ನೀತಿ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು” ಎಂದು ಫೇಸ್ ಬುಕ್ ನಾಯಕತ್ವಕ್ಕೆ ಕಂಪೆನಿಯ 11 ಉದ್ಯೋಗಿಗಳು ಪತ್ರ ಬರೆದಿದ್ದಾರೆ ಎಂದೂ ವರದಿ ತಿಳಿಸಿದೆ.
“ನಡೆದ ಘಟನೆಯಿಂದ ಹತಾಶರಾಗದೆ ಇರುವುದು ಮತ್ತು ಬೇಸರಗೊಳ್ಳದೆ ಇರಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ನಾವು ಮಾತ್ರವಲ್ಲ, ವಿಶ್ವಾದ್ಯಂತ ಇರುವ ಉದ್ಯೋಗಿಗಳು ಇದೇ ರೀತಿಯ ಭಾವನೆ ಹೊಂದಿದ್ದಾರೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.







