ಕೊರೋನ ವೈರಸ್: ಭಾರತಕ್ಕೆ ವಿದೇಶಿ ಪತ್ರಕರ್ತರ ಮರುಪ್ರವೇಶಕ್ಕೆ ಕೇಂದ್ರದ ಅನುಮತಿ

ಹೊಸದಿಲ್ಲಿ,ಆ.19: ವಿದೇಶಿ ಪತ್ರಕರ್ತರು ಮತ್ತು ಅವರ ಅವಲಂಬಿತರು ಸೂಕ್ತ ವೀಸಾ ಹೊಂದಿದ್ದರೆ ಭಾರತಕ್ಕೆ ಅವರ ಮರುಪ್ರವೇಶಕ್ಕೆ ಅನುಮತಿಯನ್ನು ನೀಡಿರುವ ಕೇಂದ್ರವು,ವಿದೇಶಿಯರ ಪ್ರವೇಶಕ್ಕಾಗಿ ನಿಯಮಗಳನ್ನೂ ಸಡಿಲಿಸಿದೆ.
ಜೂ.30ರಂದು ಈ ಸಚಿವಾಲಯದ ಸುತ್ತೋಲೆಯಲ್ಲಿ ಭಾರತ ಪ್ರವೇಶಕ್ಕೆ ಅನುಮತಿ ನೀಡಲಾಗಿರುವ ವಿದೇಶಿ ಪ್ರಜೆಗಳ ವರ್ಗಗಳ ಜೊತೆಗೆ ಜರ್ನಲಿಸ್ಟ್ (ಜೆ-1) ವೀಸಾ ಮತ್ತು ಜೆ-1Xವೀಸಾ ಹೊಂದಿರುವ ಅವರ ಅವಲಂಬಿತರು ಭಾರತವನ್ನು ಪ್ರವೇಶಿಸಲು ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವಾಲಯವು ತನ್ನ ಮಂಗಳವಾರದ ಆದೇಶದಲ್ಲಿ ಹೇಳಿದೆ.
ಕಾರ್ಯನಿಮಿತ್ತ ಅಥವಾ ಪ್ರವಾಸಕ್ಕಾಗಿ ಭಾರತಕ್ಕೆ ಪ್ರಯಾಣಿಸುವ ವಿದೇಶಿ ಪತ್ರಕರ್ತರಿಗೆ ಜೆ ವರ್ಗದ ವೀಸಾಗಳನ್ನು ಮಂಜೂರು ಮಾಡಲಾಗುತ್ತದೆ. ಇವು ಸಾಮಾನ್ಯವಾಗಿ ಮೂರು ತಿಂಗಳ ಸಿಂಧುತ್ವವನ್ನು ಹೊಂದಿರುತ್ತವೆ,ಆದರೆ ಇವುಗಳನ್ನು ನವೀಕರಿಸಬಹುದಾಗಿದೆ.
ಭಾರತಕ್ಕೆ ವಾಪಸಾಗುವ ವಿದೇಶಿ ಪತ್ರಕರ್ತರಿಗೆ ಇಮಿಗ್ರೇಷನ್ ಚೆಕ್ ಪೋಸ್ಟ್‌ಗಳಲ್ಲಿಯ ನಿರ್ಬಂಧಗಳು ಅನ್ವಯಿಸುವುದಿಲ್ಲ,ಆದರೆ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊರಡಿಸಿರುವ ಕ್ವಾರಂಟೈನ್ ಮತ್ತು ಇತರ ಕೋವಿಡ್ ಸಂಬಂಧಿ ಮಾರ್ಗಸೂಚಿಗಳಿಗೆ ಬದ್ಧರಾಗಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.







